ನಮ್ಮ ಜಲಪ್ರದೇಶಕ್ಕೆ ಅಮೆರಿಕ ನೌಕಾಪಡೆಯ ನೌಕೆ: ಚೀನಾ ಆರೋಪ

ಶಾಂಘೈ (ಚೀನಾ), ಜ. 20: ಅಮೆರಿಕದ ಯುದ್ಧನೌಕೆಯೊಂದು ಅನುಮತಿಯಿಲ್ಲದೆ ತನ್ನ ಜಲಪ್ರದೇಶಕ್ಕೆ ನುಗ್ಗಿದೆ ಎಂದು ಚೀನಾ ಶನಿವಾರ ಆರೋಪಿಸಿದೆ ಹಾಗೂ ತನ್ನ ಸಾರ್ವಭೌಮತೆಯ ರಕ್ಷಣೆಗಾಗಿ ‘ಅಗತ್ಯ ಕ್ರಮ’ಗಳನ್ನು ತೆಗೆದುಕೊಳ್ಳಲಾಗುವುದು ಎಂದಿದೆ.
ಜನವರಿ 17ರ ಸಂಜೆ ಅಮೆರಿಕದ ಕ್ಷಿಪಣಿ ನಾಶಕ ನೌಕೆ ಯುಎಸ್‌ಎಸ್ ಹಾಪರ್, ದಕ್ಷಿಣ ಚೀನಾ ಸಮುದ್ರದಲ್ಲಿರುವ ಹ್ವಾಂಗ್ಯನ್ ದ್ವೀಪದಿಂದ 12 ನಾಟಿಕಲ್ ಮೈಲಿ ವ್ಯಾಪ್ತಿಗೆ ಬಂದಿದೆ ಎಂದು ಚೀನಾದ ವಿದೇಶ ಸಚಿವಾಲಯ ತನ್ನ ವೆಬ್‌ಸೈಟ್‌ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಹ್ವಾಂಗ್ಯನ್ ದ್ವೀಪವನ್ನು ಸ್ಕಾರ್‌ಬೋರೊ ಶೋಲ್ ಎಂಬುದಾಗಿಯೂ ಕರೆಯಲಾಗುತ್ತದೆ. ಈ ವಿವಾದಾಸ್ಪದ ಪ್ರದೇಶ ತಮಗೆ ಸೇರಿದ್ದು ಎಂಬುದಾಗಿ ಫಿಲಿಪ್ಪೀನ್ಸ್ ಮತ್ತು ಚೀನಾಗಳು ಹೇಳಿಕೊಳ್ಳುತ್ತಿವೆ.
ಅಮೆರಿಕದ ನೌಕೆಯ ಗುರುತು ಪತ್ತೆ ಹಚ್ಚಿದ ಬಳಿಕ, ಹಿಂದೆ ಹೋಗುವಂತೆ ಚೀನಾ ಸೇನೆ ಅದಕ್ಕೆ ಸೂಚಿಸಿಲ್ಲ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರ ಲು ಕಾಂಗ್ ತಿಳಿಸಿದರು.
Next Story





