ನೂರು ಹೆಗಡೆ ಬಂದರೂ ಸಂವಿಧಾನ ಬದಲಾವಣೆ ಅಸಾಧ್ಯ: ಕೇಂದ್ರ ಸಚಿವರಿಗೆ ಬಿಎಸ್ಪಿ ರಾಜ್ಯಾಧ್ಯಕ್ಷ ಮಹೇಶ್ ತಿರುಗೇಟು

ಮೂಡಿಗೆರೆ, ಜ.20: ಭಾರತೀಯ ಸಂವಿಧಾನವನ್ನೇ ಬದಲಾಯಿಸಿಬಿಡುತ್ತೇವೆ ಎಂದು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ನೀಡಿರುವ ಕೇಂದ್ರ ಮಂತ್ರಿ ಅನಂತಕುಮಾರ್ ಹೆಗಡೆ ಅವರನ್ನೇ ಮುಂದಿನ ಚುನಾವಣೆಯಲ್ಲಿ ಬದಲಾಯಿಸುವ ತಾಕತ್ತು ತಮ್ಮ ಪಕ್ಷಕ್ಕಿದೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್ ಹೇಳಿದ್ದಾರೆ.
ಶನಿವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಅವರ ನೈಜ ಸಂವಿಧಾನ ಇದುವರೆಗೂ ಜಾರಿಗೊಂಡಿಲ್ಲ. ಅಲ್ಪಸ್ವಲ ಜಾರಿಗೊಂಡಿರುವ ಸಂವಿಧಾನವನ್ನು ಪ್ರಭುತ್ವ ವ್ಯವಸ್ಥೆಯಲ್ಲಿ ಆಳುವ ಸರಕಾರಗಳು 123 ಬಾರಿ ತಿದ್ದುಪಡಿ ಮಾಡಿವೆ. ಇನ್ನೂ ಸಮರ್ಪಕವಾಗಿ ಜಾರಿಗೊಳ್ಳದ ಸಂವಿಧಾನವನ್ನು ಅನಂತಕುಮಾರ್ ಹೆಗಡೆ ಬದಲಾಯಿಸಲು ಹೇಗೆ ಸಾಧ್ಯ ಎಂದು ಕೇಂದ್ರ ಸಚಿವರಿಗೆ ತಿರುಗೇಟು ನೀಡಿದ್ದಾರೆ.
ಕೇಂದ್ರ ಹಾಗೂ ರಾಜ್ಯದಲ್ಲಿ ಮುಂದಿನ ಚುನಾವಣೆ ವೇಳೆ ಯಾವ ಪಕ್ಷಕ್ಕೂ ಬಹುಮತ ಪಡೆಯದೇ ಅತಂತ್ರ ಲೋಕಸಭೆ ಹಾಗೂ ವಿಧಾನಸಭೆ ನಿರ್ಮಾಣವಾಗಬೇಕು. ಬಹುಮತದ ಸರಕಾರ ಅಧಿಕಾರಕ್ಕೆ ಬಂದಾಗ ಕೋಮುವಾದ ಮತ್ತು ಅಧಿಕಾರದ ಅಮಲು ತಲೆಗೇರುತ್ತದೆ. ಆಡಳಿತ ನಡೆಸುವ ಬಗ್ಗೆ ಚಿಂತೆ ಮಾಡದೇ ದೇಶ ವಿದೇಶ ಸುತ್ತಿ ಆಳುವ ವರ್ಗ ಕಾಲಹರಣ ಮಾಡುತ್ತದೆ. ಅತಂತ್ರ ವಿಧಾನಸಭೆ ಮತ್ತು ಲೋಕಸಭೆ ನಿರ್ಮಾಣಗೊಂಡರೆ ಸರಕಾರದೊಂದಿಗೆ ಕೈ ಜೋಡಿಸುವ ಪಕ್ಷ ಕಿವಿಹಿಂಡುವ ಕೆಲಸ ಮಾಡಿದಾಗ ಉತ್ತಮ ಯೋಜನೆ ರೂಪಿಸಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸರಕಾರ ಮತ್ತು ಪ್ರಧಾನಿ ಮೋದಿಯವರ ಆಡಳಿತ ಕ್ರಮವನ್ನು ಟೀಕಿಸಿದ್ದಾರೆ.
ಕೋಮುವಾದದಲ್ಲೇ ಮುಳುಗಿರುವ ಅನಂತಕುಮಾರ್ ಹೆಗಡೆ ಸಚಿವ ಸ್ಥಾನಕ್ಕೆ ನಾಲಾಯಕ್. ಇಂತಹ ಮತಿಗೆಟ್ಟ ಮಂತ್ರಿಗೆ ಸಂವಿಧಾನ ಬದಲಾಯಿಸುವ ಬಗ್ಗೆ ಹೇಳಿಕೆ ನೀಡಲು ಅವರ ಕೋಮುವಾದಿ ಪಡೆ ಹೇಳಿ ಕಳುಹಿಸಿದೆ. ಅದರಂತೆ ಹೆಗಡೆ ನಡೆದುಕೊಂಡಿದ್ದಾರೆ. ಇಂತಹ ಸಾವಿರ ಕೋಮುವಾದಿಗಳು ಮತ್ತು ನೂರು ಅನಂತಕುಮಾರ್ ಹೆಗಡೆ ಬಂದರೂ ಸಂವಿಧಾನ ಬದಲಾಯಿಸಲು ಅವಕಾಶ ನೀಡುವುದಿಲ್ಲ.
-ಎನ್.ಮಹೇಶ್ ,ಬಿಎಸ್ಪಿ ರಾಜ್ಯಾಧ್ಯಕ್ಷ







