ಪಡಿತರ ಚೀಟಿಯಲ್ಲಿ ರದ್ದುಗೊಂಡ ಹೆಸರು ಸೇರ್ಪಡೆಗೆ ಅವಕಾಶ: ಪ್ರಮೋದ್ ಮಧ್ವರಾಜ್

ಉಡುಪಿ, ಜ.20: ಆಧಾರ್ ನೊಂದಣಿಯಾಗದೆ ಪಡಿತರ ಚೀಟಿಯಲ್ಲಿ ರದ್ದುಗೊಂಡಿರುವ ಕುಟುಂಬ ಸದಸ್ಯರುಗಳ ಹೆಸರುಗಳನ್ನು ಆಧಾರ್ ಸಂಖ್ಯೆ ನೀಡಿ ಮರು ಸೇರ್ಪಡೆ ಮಾಡಲು ಅವಕಾಶವಿದ್ದು, ಜಿಲ್ಲೆಯ ನಾಗರಿಕರು ಇದರ ಪ್ರಯೋಜನ ಪಡೆಯುವಂತೆ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ, ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ತಿಳಿಸಿದ್ದಾರೆ.
ಶನಿವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಆಹಾರ ಜಾಗೃತಿ ಸಮಿತಿ ಸಭೆಯ ಅಧ್ಯ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಆಧಾರ್ ನೊಂದಣಿ ಸಮಸ್ಯೆಯಿಂದಾಗಿ ಸುಮಾರು 1,10,000 ಕುಟುಂಬ ಸದಸ್ಯರ ಹೆಸರುಗಳು ಪಡಿತರ ಚೀಟಿಯಿಂದ ರದ್ದುಗೊಂಡಿವೆ. ಇಷ್ಟು ಮಂದಿ ನಾಗರಿಕರು ತಮ್ಮ ಪಾಲಿನ ಪಡಿತರ ಸಿಗದೇ ತೊಂದರೆ ಅನುಭವಿಸು ವಂತಾಗಿದೆ. ಆದರೆ ರದ್ದುಗೊಂಡಿರುವ ಪಡಿತರ ಚೀಟಿಯಲ್ಲಿರುವ ಕುಟುಂಬ ಸದಸ್ಯರು ತಮ್ಮ ಆಧಾರ್ ಸಂಖ್ಯೆಯನ್ನು, ಗ್ರಾಮೀಣ ಪ್ರದೇಶದವರು ಸಮೀಪದ ಗ್ರಾಪಂಗಳಲ್ಲಿ ಹಾಗೂ ನಗರ ಪ್ರದೇಶದಲ್ಲಿನ ಪ್ರಾಂಚೈಸಿಗಳಲ್ಲಿ ದಾಖಲಿಸಿ ಮರು ಸೇರ್ಪಡೆ ಮಾಡಲು ಅವಕಾಶವಿದೆ ಎಂದರು.
ಮರು ಸೇರ್ಪಡೆಗೊಂಡ ನಾಗರಿಕರು ಮಾಹಿತಿಯನ್ನು ತಾಲೂಕು ಕಚೇರಿಯ ಆಹಾರ ಶಾಖೆಗೆ ನೀಡಿ, ಸರಕಾರದಿಂದ ಸಿಗುವ ಪಡಿತರ ಸೌಲ್ಯದ ಪ್ರಯೋಜನ ಪಡೆಯುವಂತೆ ತಿಳಿಸಿದ ಸಚಿವರು, ಹೆಸರು ಸೇರ್ಪಡೆಗೆ ಅವಕಾಶ ವಿರುವ ಕುರಿತು ಪಡಿತರ ಅಂಗಡಿಯವರು ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಹಾಗೂ ಪಡಿತರ ಚೀಟಿಯಲ್ಲಿ ಬಿಟ್ಟು ಹೋದ ಹೆಸರುಗಳ ಮರು ಸೇರ್ಪಡೆ ಕುರಿತಂತೆ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್‌ಗಳ ಅಧ್ಯಕ್ಷತೆಯಲ್ಲಿ ವಿಶೇಷ ಆಭಿಯಾನ ಕೈಗೊಳ್ಳುವಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಆಧಾರ್ ಸಂಖ್ಯೆ ಜೋಡಣೆ ಆಗಿದ್ದರೂ ಸಹ ಕೆಲವು ಕಡೆ ಪಡಿತರ ಸಿಗುತ್ತಿಲ್ಲ ಎಂದು ಜಾಗೃತ ಸಮಿತಿ ಸದಸ್ಯರು ತಿಳಿಸಿದರು.ಈ ಕುರಿತಂತೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದರು. ದೀನದಯಾಳ್ ವಿದ್ಯುತ್ ಯೋಜನೆ, ಬಾಗ್ಯಲಕ್ಷ್ಮಿ ಯೋಜನೆ, ವಾಜಪೇಯಿ ಆರೋಗ್ಯ ಯೋಜನೆಯಡಿ ಚಿಕಿತ್ಸೆ ಪಡೆಯಲು ಬಿಪಿಎಲ್ ಕಾರ್ಡ್ ಅಗತ್ಯವಿದ್ದು, ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ನಿರೀಕ್ಷೆಯಲ್ಲಿರುವ ಸಾರ್ವಜನಿಕರಿಗೆ ಈ ಯೋಜನೆಯ ಪ್ರಯೋಜನಗಳು ತಪ್ಪಿಹೋಗದಂತೆ ಆದ್ಯತೆ ಮೇಲೆ ಬಿಪಿಎಲ್ ಕಾರ್ಡ್ ವಿತರಿಸುವಂತೆ ಸೂಚಿಸಿದರು.
ಪಡಿತರ ಅಂಗಡಿಗಳಿಗೆ ಬರಲು ಅಸಾಧ್ಯವಾದ ಅಶಕ್ತರ ಪರವಾಗಿ, ಅವರ ಪರಿಚಯದ ಮತ್ತೊಬ್ಬರಿಗೆ ಪಡಿತರ ನೀಡಲು ಅವಕಾಶವಿದ್ದು, ಇದನ್ನು ಪಾಲಿಸುವಂತೆ ಅಂಗಡಿ ಮಾಲೀಕರಿಗೆ ತಿಳಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಪಡಿತರ ವಿತರಿಸುವ ಅಂಗಡಿಗಳು ನಿಗದಿತ ಸಮಯದಲ್ಲಿ ಸಾರ್ವಜನಿಕರಿಗೆ ಪಡಿತರ ವಿತರಿಸುವಂತೆ ಅನಾವಶ್ಯಕ ರಜೆ ಮಾಡಿ ತೊಂದರೆ ನೀಡದಂತೆ ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ ಪಡಿತರ ಸಾಗಿಸುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸುವಂತೆ ಹಾಗೂ ಗೋಡೌನ್‌ಗಳಲ್ಲಿ ಪಡಿತರ ಹಾಳಾಗದಂತೆ ಎಚ್ಚರಿಕೆ ವಹಿಸುವಂತೆ ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಆಹಾರ ಜಾಗೃತಿ ಸಮಿತಿ ಸದಸ್ಯರಿಗೆ ಗುರುತಿನ ಚೀಟಿ ನೀಡುವಂತೆ ಹಾಗೂ ಸದಸ್ಯರು ಪಡಿತರ ಅಂಗಡಿಗಳಿಗೆ ಭೇಟಿ ನೀಡಿ ಅಲ್ಲಿನ ನ್ಯೂನತೆಗಳ ಕುರಿತು ವರದಿ ನೀಡುವಂತೆಯೂ ಸೂಚಿಸಿದರು.
ಸಭೆಯಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಅಪರ ಜಿಲ್ಲಾಧಿಕಾರಿ ಅನುರಾಧ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಆಹಾರ ಇಲಾಖೆಯ ಉಪ ನಿರ್ದೇಶಕ ಎಂ.ಆರ್.ಭಟ್ ಉಪಸ್ಥಿತರಿದ್ದರು.







