ಉಡುಪಿ: ಕ್ರೀಡಾ ವಸತಿ ಶಾಲೆಗೆ ಆಯ್ಕೆ
ಉಡುಪಿ, ಜ.20: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆಯುತ್ತಿರುವ ಕ್ರೀಡಾ ವಸತಿ ಶಾಲೆ/ನಿಲಯ ಪ್ರವೇಶಕ್ಕೆ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಜೂನ್ 1ರಿಂದ 8ನೇ ತರಗತಿ ಪ್ರವೇಶಕ್ಕೆ ಅರ್ಹತೆ ಹೊಂದುವ (2005ರ ಜೂ.1ರ ನಂತರ ಜನಿಸಿದ) 14 ವರ್ಷದೊಳಗಿನ ಬಾಲಕ/ಬಾಲಕಿ ಯರನ್ನು ಆಯ್ಕೆ ಮಾಡಲಾಗುವುದು.
ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯನ್ನು ಕೆಳಕಂಡ ಸ್ಥಳಗಳಲ್ಲಿ ನಮೂದಿಸಿದ ದಿನಗಳಂದು ಬೆಳಗ್ಗೆ 10ಗಂಟೆಗೆ ನಡೆಸಲಾಗುವುದು. ಆಯ್ಕೆಗೆ ಬರುವ ಕ್ರೀಡಾಪಟುಗಳು ಕ್ರೀಡಾ ಸಮವಸ್ತ್ರ ಧರಿಸಿ ಭಾಗವಹಿಸಬೇಕು.
ಉಡುಪಿ- ಜ.24ರಂದು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡು, ಬ್ರಹ್ಮಾವರ- ಜ.25ರಂದು ಸರಕಾರಿ ಜೂನಿಯರ್ ಕಾಲೇಜು ಮೈದಾನ, ಜ.29 -ಕುಂದಾಪುರದ ಗಾಂಧಿ ಮೈದಾನ, ಜ.30- ಬೈಂದೂರು ಗಾಂಧಿ ಮೈದಾನ ಸರಕಾರಿ ಜೂನಿಯರ್ ಕಾಲೇಜು ಎದುರು, ಜ.31-ಕಾರ್ಕಳದ ಗಾಂಧಿ ಮೈದಾನದಲ್ಲಿ ಆಯ್ಕೆಗಳು ನಡೆಯಲಿವೆ.
ಹಿರಿಯ ವಿಭಾಗದ ಕ್ರೀಡಾವಸತಿ ನಿಲಯ ಪ್ರವೇಶಕ್ಕೆ ಜೂನ್ 1ಕ್ಕೆ 18 ವರ್ಷ ವಯೋಮಿತಿಯೊಳಗಿದ್ದು (2001ರ ಜೂ.1ರ ನಂತರ ಜನಿಸಿದ) ಪ್ರಥಮ ಪಿಯುಸಿ ಸೇರಲು ಅರ್ಹರಾಗಿರುವ ವಿದ್ಯಾರ್ಥಿ ಕ್ರೀಡಾಪಟುಗಳಿಗೆ ನೇರವಾಗಿ ವಿಭಾಗಮಟ್ಟದಲ್ಲಿ ಆಯ್ಕೆ ಮಾಡುವುದರಿಂದ ಆಸಕ್ತರು ನಿಗದಿಪಡಿಸಿದ ನಮೂನೆಯಲ್ಲಿ ವೈದ್ಯಕೀಯ ಪ್ರಮಾಣಪತ್ರ ಹಾಗೂ ದೃಢೀಕರಿಸಿದ ಜನನ ದಿನಾಂಕ ಪ್ರಮಾಣಪತ್ರದೊಂದಿಗೆ ಅರ್ಜಿಯನ್ನು ಫೆ.6ರೊಳಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡು, ಉಡುಪಿ ಇವರಿಗೆ ಸಲ್ಲಿಸಬೇಕು.
ಆಯ್ಕೆಯಾದ ಕ್ರೀಡಾಪಟುಗಳಿಗೆ ಉಚಿತ ಊಟ, ವಸತಿ, ಸಮವಸ್ತ್ರ, ವಿದ್ಯಾಭ್ಯಾಸದೊಂದಿಗೆ ವಿಶೇಷ ಕ್ರೀಡಾ ತರಬೇತಿಯನ್ನು ಇಲಾಖಾ ವತಿಯಿಂದ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಇಲಾಖೆಯ ಸಹಾಯಕ ನಿರ್ದೇಶಕರು (ದೂರವಾಣಿ:0820-2521324), ಕೆ.ಅನಂತ್‌ರಾಮ್-9448984729 ಮತ್ತು ಮನೋಜ್ ಕುಮಾರ್, ಸಹಾಯಕ ವಾಲಿಬಾಲ್ ತರಬೇತುದಾರರು- 9743374795 ಇವರನ್ನು ಸಂಪರ್ಕಿಸುಂತೆ ಇಲಾಖೆ ಪ್ರಕಟಣೆ ತಿಳಿಸಿದೆ.







