ಶಾಸಕರ ಅನರ್ಹತೆ ಪ್ರಕರಣ: ಅಹವಾಲು ಆಲಿಸಲು ರಾಷ್ಟ್ರಪತಿಗೆ ‘ಆಪ್’ ಮನವಿ

ಹೊಸದಿಲ್ಲಿ, ಜ.20: ಲಾಭದಾಯಕ ಹುದ್ದೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷ(ಆಪ್)ದ 20 ಶಾಸಕರನ್ನು ಅನರ್ಹಗೊಳಿಸಿದ ಚುನಾವಣಾ ಆಯೋಗದ ಕ್ರಮ ಅಸಾಂವಿಧಾನಿಕ ಎಂದು ಬಣ್ಣಿಸಿರುವ ದಿಲ್ಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಈ ಕುರಿತ ಅಧಿಕೃತ ಆದೇಶಕ್ಕೆ ಸಹಿ ಹಾಕುವ ಮೊದಲು ತಮ್ಮ ಅಹವಾಲನ್ನು ಆಲಿಸುವಂತೆ ರಾಷ್ಟ್ರಪತಿಯವರಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದಿದ್ದಾರೆ.
ರಾಷ್ಟ್ರಪತಿಯವರನ್ನು ಭೇಟಿಯಾಗಲು ಸಮಯ ನಿಗದಿಗೊಳಿಸಲು ಕೋರಿದ್ದೇವೆ. ಅವಕಾಶ ದೊರೆತ ಬಳಿಕ ಅನರ್ಹಗೊಂಡಿರುವ 20 ಶಾಸಕರು ರಾಷ್ಟ್ರಪತಿಯವರನ್ನು ಭೇಟಿಯಾಗಿ ತಮ್ಮ ಬಳಿ ಇರುವ ಪುರಾವೆಗಳನ್ನು ಸಲ್ಲಿಸಲಿದ್ದಾರೆ ಎಂದವರು ಹೇಳಿದರು. 20 ಶಾಸಕರಿಗೆ ತಮ್ಮ ಹೇಳಿಕೆಗಳನ್ನು ಮಂಡಿಸಲು ಆಯೋಗ ಅವಕಾಶ ನೀಡಿಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ಹಾಗೂ ನಿಯಮ ಬಾಹಿರವಾಗಿದೆ ಎಂದು ಸಿಸೋಡಿಯಾ ಹೇಳಿದ್ದಾರೆ. ಈ ಪ್ರಕರಣದಲ್ಲಿ ರಾಷ್ಟ್ರಪತಿಯವರ ಕಚೇರಿ ಸ್ವವಿವೇಚನೆಯ ನಿರ್ಧಾರ ಕೈಗೊಳ್ಳುವಂತಿಲ್ಲ ಹಾಗೂ ಚುನಾವಣಾ ಆಯೋಗದ ಸಲಹೆಯಂತೆ ಕಾರ್ಯನಿರ್ವಹಿಸಬೇಕು ಎಂು ಕಾನೂನಿನಲ್ಲಿ ಸ್ಪಷ್ಟಪಡಿಸಲಾಗಿದೆ.