‘ಪದ್ಮಾವತ್’ ವಿವಾದ: ಟಿಕೆಟ್ ಕೌಂಟರ್‌ಗೆ ಬೆಂಕಿ ಹಚ್ಚಿದ ಕರ್ಣಿ ಸೇನೆ

ಫರಿದಾಬಾದ್ (ಹರ್ಯಾಣ), ಜ.20: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ವಿವಾದಿತ ಪದ್ಮಾವತ್ ಸಿನೆಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು ಇದರಿಂದ ಆಕ್ರೋಶಗೊಂಡಿರುವ ರಜಪೂತ ಕರ್ಣಿ ಸೇನಾ ಸಂಘಟನೆ ಚಿತ್ರಮಂದಿರದ ಟಿಕೆಟ್ ಕೌಂಟರ್‌ಗೆ ಬೆಂಕಿ ಹಚ್ಚಿದ ಘಟನೆ ಹರ್ಯಾಣದ ಫರಿದಾಬಾದ್‌ನ ಸೆಕ್ಟರ್ 10ರಲ್ಲಿ ನಡೆದಿದೆ. ಚಿತ್ರದ ಬಿಡುಗಡೆಯ ವಿರುದ್ಧ ಪ್ರತಿಭಟನೆಯನ್ನು ಮುಂದುವರಿಸಿರುವ ಕರ್ಣಿ ಸೇನೆ ಸಿನೆಮಾ ನಿರ್ದೇಶಕರ ವಿರುದ್ಧ ಘೋಷಣೆಗಳನ್ನು ಕೂಗಿರುವ ದೃಶ್ಯಾವಳಿಗಳನ್ನು ದಾಖಲಿಸಲಾಗಿದೆ. ಜನವರಿ 18ರಂದು ಸರ್ವೋಚ್ಚ ನ್ಯಾಯಾಲಯವು ಪದ್ಮಾವತ್ ಚಿತ್ರದ ಮೇಲಿನ ನಿಷೇಧವನ್ನು ತೆರವುಗೊಳಿಸಿದ ದಿನದಂದು ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸರು ಕರ್ಣಿ ಸೇನೆಯ ಕಾರ್ಯಕರ್ತರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಪದ್ಮಾವತ್ ಸಿನೆಮಾಗೆ ಸೆನ್ಸರ್ ಪ್ರಮಾಣ ಪತ್ರ ನೀಡಿರುವ ಸೆನ್ಸರ್ ಮಂಡಳಿ ಮುಖ್ಯಸ್ಥ ಪ್ರಸೂನ್ ಜೋಶಿ ವಿರುದ್ಧ ಹರಿಹಾಯ್ದಿರುವ ಪ್ರತಿಭಟನಾಕಾರರು ಜೋಶಿಯವರನ್ನು ಜೈಪುರ ಸಾಹಿತ್ಯೋತ್ಸವಕ್ಕೆ ಆಗಮಿಸಲು ಬಿಡುವುದಿಲ್ಲ.
ಒಂದು ವೇಳೆ ಅವರು ನಗರಕ್ಕೆ ಆಗಮಿಸಿದರೆ ಅವರ ಮೇಲೆ ಹಲ್ಲೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಪದ್ಮಾವತ್ ಸಿನೆದ ಬಿಡುಗಡೆಯನ್ನು ಬೆಂಬಲಿಸುವ ಅಥವಾ ಚಿತ್ರಕ್ಕೆ ಬೆಂಬಲ ನೀಡಿ ಮಾತನಾಡಿರುವ ಯಾರನ್ನು ಕೂಡಾ ಜೈಪುರಕ್ಕೆ ಆಗಮಿಸಲು ಬಿಡುವುದಿಲ್ಲ ಎಂದು ಕರ್ಣಿ ಸೇನೆಯ ಅಧ್ಯಕ್ಷರಾದ ಸುಖ್‌ದೇವ್ ಸಿಂಗ ಗೊಗಮೆದಿ ಎಚ್ಚರಿಸಿದ್ದಾರೆ. ಚಿತ್ರದ ಹೆಸರನ್ನು ಪದ್ಮಾವತಿಯಿಂದ ಪದ್ಮಾವತ್ ಮಾಡಿದ ಮಾತ್ರಕ್ಕೆ ನಮಗೆ ಸಮಾಧಾನವಾಗುವುದಿಲ್ಲ. ಸಿನೆಮಾದ ಮೇಲೆ ಸಂಪೂರ್ಣ ನಿಷೇಧ ಹೇರಬೇಕು ಎಂಬುದು ನಮ್ಮ ಆಗ್ರಹ ಎಂದು ಅವರು ತಿಳಿಸಿದ್ದಾರೆ. ಸೆನ್ಸರ್ ಮಂಡಳಿ (ಸಿಬಿಎಫ್‌ಸಿ) ಪ್ರಮಾಣ ಪತ್ರ ನೀಡಿದ ಸಿನೆಮಾವನ್ನು ನಿಷೇಧಿಸುವುದು ನೈತಿಕವಾಗಿ ಸರಿಯಲ್ಲ ಎಂಬ ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಪದ್ಮಾವತ್ ಸಿನೆಮಾದ ಮೇಲೆ ಗುಜರಾತ್, ಮಧ್ಯಪ್ರದೇಶ, ಹರ್ಯಾಣ ಮತ್ತು ರಾಜಸ್ಥಾನ ಸರಕಾರಗಳು ವಿಧಿಸಿದ್ದ ನಿಷೇಧವನ್ನು ತೆರವುಗೊಳಿಸಿತ್ತು. ಆದರೆ ಗುಜರಾತ್‌ನಲ್ಲಿ ಕರ್ಣಿ ಸೇನೆಯ ಕಾರ್ಯಕರ್ತರು ತಮ್ಮ ಚಿತ್ರಮಂದಿರಕ್ಕೆ ಹಾನಿ ಉಂಟುಮಾಡುವ ಭಯದಿಂದ ಚಿತ್ರಮಂದಿರದ ಮಾಲಕರು ಪದ್ಮಾವತ್ ಸಿನೆಮಾವನ್ನು ಪ್ರದರ್ಶಿಸಲು ಹಿಂದೇಟು ಹಾಕಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನಾವು ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇವೆ. ಅವರು ನಮ್ಮ ಚಿತ್ರಮಂದಿರಗಳಿಗೆ ಭದ್ರತೆಯನ್ನು ಒದಗಿಸುವ ಭರವಸೆಯನ್ನೂ ನೀಡಿದ್ದಾರೆ. ಆದರೆ ಏನೇ ಆದರೂ ಕೊನೆಯಲ್ಲಿ ನಷ್ಟ ಅನುಭವಿಸುವವರು ನಾವೇ. ನಮ್ಮ ಮಲ್ಟಿಪ್ಲೆಕ್ಸ್ ಅಥವಾ ಚಿತ್ರಮಂದಿರಗಳಿಗೆ ಹಾನಿಯಾಗದು ಎಂದು ಪೊಲೀಸರಾಗಲೀ ಅಥವಾ ಸರಕಾರವಾಗಲೀ ಹೇಗೆ ಭರವಸೆ ನೀಡುತ್ತದೆ ಎಂದು ಗುಜರಾತ್ ಮಲ್ಟಿಪ್ಲೆಕ್ಸ್ ಮಾಲಕರ ಸಂಘದ ಸದಸ್ಯ ಮತ್ತು ವೈಡ್ ಆ್ಯಂಗಲ್ ಮಲ್ಟಿಪ್ಲೆಕ್ಸ್‌ನ ನಿರ್ದೇಶಕರಾದ ರಾಕೇಶ್ ಪಟೇಲ್ ಪ್ರಶ್ನಿಸಿದ್ದಾರೆ.
ಹಾಗಾಗಿ ಜನರೇ ಚಿತ್ರಮಂದಿರಕ್ಕೆ ಬರದೆ ಅಥವಾ ಚಿತ್ರಮಂದಿರಕ್ಕೆ ಹಾನಿಯಾಗಿ ನಷ್ಟ ಅನುಭವಿಸುವ ಬದಲು ಪದ್ಮಾವತ್ ಸಿನೆಮಾವನ್ನು ಪ್ರದರ್ಶಿಸದೆ ಇರಲು ಗುಜರಾತ್‌ನ ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರದ ಮಾಲಕರು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.







