ಮತ್ತೆ ಸಂಕಷ್ಟದಲ್ಲಿದೆ ಫಲ್ಗುಣಿ ನದಿ
ದುರ್ನಾತ ಬೀರುತ್ತಿದೆ ತೋಕೂರು ಹಳ್ಳ!
►ಹಳ್ಳದ ನೀರು ಫಲ್ಗುಣಿ ನದಿ ಒಡಲಿಗೆ!
►ಆಡಳಿತಗಾರರೇ ಸ್ವಲ್ಪ ಇತ್ತ ನೋಡಿ
ಮಂಗಳೂರು, ಜ.20: ಕರಾವಳಿಯ ಜೀವನಾಡಿ, ಜೀವ ಜಲಗಳಲ್ಲಿ ಒಂದಾಗಿರುವ ಫಲ್ಗುಣಿ ನದಿ ಮತ್ತೆ ಸಂಕಷ್ಟದಲ್ಲಿದೆ. ಕಳೆದ ವರ್ಷ ಮರವೂರು ಬಳಿ ಈ ನದಿ ಕಲುಷಿತಗೊಂಡು ಮರವೂರು ಅಣೆಕಟ್ಟಿನ ಅಂಚಿನಲ್ಲಿ ಸಾವಿರಾರು ಮೀನುಗಳ ಮಾರಣಹೋಮವಾಗಿತ್ತು. ಇನ್ನೇನು ಆ ಘಟನೆ ಮರೆತು ಹೋಗುವಷ್ಟರಲ್ಲಿ, ಫಲ್ಗುಣಿ ನದಿಯು ಇನ್ನೊಂದು ಭಾಗವಾದ ತೋಕೂರು ಬಳಿ ಸಂಕಷ್ಟಕ್ಕೆ ಸಿಲುಕಿದೆ.
ಫಲ್ಗುಣಿಯನ್ನು ಸೇರುವ ತೋಕೂರು ಹಳ್ಳದ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದೆ. ಕೂಳೂರಿನ ಕುದುರೆಮುಖ ಕಂಪೆನಿ ಬಳಿಯಿಂದ ಜೋಕಟ್ಟೆಗೆ ಹಾದು ಹಾಗುವ ಎಂಎಸ್ಇಝೆಡ್ನ ಕಾರಿಡಾರ್ ರಸ್ತೆಯ(ತೋಕೂರು ರಸ್ತೆ) ಬಲಬದಿಯ ತೋಕೂರು ಹಳ್ಳವು ಸಂಪೂರ್ಣವಾಗಿ ಕಲುಷಿತಗೊಂಡಿದ್ದು, ಆ ದಾರಿಯಲ್ಲಿ ನಡೆದಾಡುವುದು, ವಾಹನದಲ್ಲಿ ಸಂಚರಿ ಸುವುದು ಸಾಧ್ಯವಾಗದಷ್ಟು ದುರ್ನಾತ ಸೃಷ್ಟಿಯಾಗಿದೆ. ಈ ಮಾಲಿನ್ಯಕ್ಕೆ ಕಾರಣವನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳದಿದ್ದರೆ ಹಳ್ಳದ ನೀರು ಫಲ್ಗುಣಿ ನದಿಯನ್ನು ಸಂಪೂರ್ಣವಾಗಿ ಕಲುಷಿತಗೊಳಿಸುವ ಭೀತಿ ಎದುರಾಗಿದೆ.
ದ.ಕ. ಜಿಲ್ಲೆಯ ಜೀವನದಿಗಳಲ್ಲಿ ಒಂದಾದ ಫಲ್ಗುಣಿ(ಗುರುಪುರ)ನದಿ, ಕಳೆದ ಬೇಸಿಗೆಯಲ್ಲಿ ಮರವೂರು, ಬಜ್ಪೆ ಭಾಗದಲ್ಲಿ ಕಲುಷಿತಗೊಂಡು ದುರ್ನಾತ ಬೀರುತ್ತಿತ್ತು. ಬೃಹತ್ ಕೈಗಾರಿಕೆಗಳ ತ್ಯಾಜ್ಯ ನೀರು ನದಿಗೆ ಸೇರಿದ್ದರಿಂದಲೇ ಇದು ಮಲಿನಗೊಂಡಿದೆ ಎಂದು ಜನರು ಆಪಾದಿಸಿದ್ದರು.
ಈ ಹಿನ್ನೆಲೆಯಲ್ಲಿ ಪರಿಶೀಲಿಸಿದ ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿಗಳು ನದಿ ಮಲಿನದ ಕಾರಣ ತಿಳಿಯಲು ಸಮಿತಿ ರಚಿಸಿತ್ತು. ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸುತ್ತಲಿನ ಕೈಗಾರಿಕೆಗಳಿಂದ ಸೋರಿಕೆ ಪತ್ತೆ ಹಚ್ಚಲು ತಪಾಸಣೆಗೆ ಜಂಟಿ ತಂಡಗಳನ್ನು ರಚಿಸಲಾಗಿತ್ತು. ವರದಿಗಳು ಬಂದ ನಂತರ ಕಠಿಣ ಕ್ರಮದ ಭರವಸೆ ನೀಡಲಾಗಿತ್ತು. ಆದರೆ ಅಷ್ಟರಲ್ಲೇ ಮಳೆ ಆರಂಭವಾದ ಕಾರಣ ನದಿಗಳು ತುಂಬಿ ಹರಿಯಲಾರಂಭಿಸಿದ್ದರಿಂದ ಮಾಲಿನ್ಯ ನೀಗಿತ್ತು. ಸಮಸ್ಯೆ ಇಲ್ಲವಾಗಿದ್ದರಿಂದ ಜನರೂ ಅದನ್ನು ಮರೆತರು. ಈ ನಡುವೆ, ಮಾಲಿನ್ಯ ಕಂಡು ಹಿಡಿಯಲು ರಚನೆಗೊಂಡಿದ್ದ ಸಮಿತಿಯ ವರದಿಯ ಬಗ್ಗೆ ಯಾವುದೇ ಮಾಹಿತಿಯೂ ಸಾರ್ವಜನಿಕವಾಗಿ ಅಲಭ್ಯವಾಯಿತು.
ಇದೀಗ ಬೇಸಿಗೆ ಆರಂಭಗೊಂಡಿರುವಂತೆಯೇ, ತೋಕೂರು ಬಳಿ ನದಿಯಲ್ಲಿ ಮತ್ತೆ ಮಾಲಿನ್ಯ ಕಾಣಿಸಿಕೊಂಡಿದೆ. ಕುದುರೆಮುಖದಿಂದ ತೋಕೂರು- ಜೋಕಟ್ಟೆ ದಾರಿಯ ಕಾರಿಡಾರ್ ರಸ್ತೆಯುದ್ದಕ್ಕೂ ಮಧ್ಯಮ ಹಾಗೂ ಬೃಹತ್ ಗಾತ್ರದ ಕಾರ್ಖಾನೆಗಳಿವೆ. ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಸಾವಿರಾರು ಸಾರ್ವಜನಿಕರು ಸಂಚರಿಸುತ್ತಿರುತ್ತಾರೆ. ಆದರೆ ಕಳೆದ ಕೆಲ ದಿನಗಳಿಂದ ಈ ದಾರಿಯಲ್ಲಿ ಸಾಗುವವರು ಮೂಗು ಮುಚ್ಚಿ ಕೊಂಡೇ ಸಾಗಬೇಕು. ಉಸಿರುಗಟ್ಟುವ ದುರ್ನಾತ ಈ ದಾರಿಯುದ್ದಕ್ಕೂ ವಾಕರಿಕೆ ಬರಿಸುತ್ತದೆ.
ವರ್ಷವಿಡೀ ತುಂಬಿ ಹರಿಯುವ ಫಲ್ಗುಣಿ ನದಿಯಲ್ಲಿ ಬೇಸಗೆಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತದೆ. ಮಾತ್ರವಲ್ಲದೆ, ನದಿ ಪಾತ್ರದ ಬಹುತೇಕ ಭಾಗವನ್ನು ಇಲ್ಲಿನ ಕಾರ್ಖಾನೆ, ಕಾರಿಡಾರ್ ರಸ್ತೆಗಾಗಿ ಮುಚ್ಚಲಾಗಿದೆ. ಹಾಗಾಗಿ ನದಿಯನ್ನು ಸೇರುತ್ತಿದ್ದ ಇಲ್ಲಿನ ಹಲವಾರು ತೋಡು, ಹಳ್ಳಗಳೂ ಮುಚ್ಚಿಹೋಗಿವೆ. ಆದರೆ ಕೆಲವೆಡೆ ಅಲ್ಲಲ್ಲಿ ಈ ಹಳ್ಳಗಳಲ್ಲಿ ನೀರು ಹರಿಯುತ್ತಿದ್ದು, ಅದು ಇದೀಗ ಮಲಿನಗೊಂಡು ದುರ್ನಾತ ಬೀರುತ್ತಿವೆ.
ಫಲ್ಗುಣಿಗೆ ಸೇರುವ ನೀರಿನ ಮೂಲಗಳಲ್ಲಿ ತೋಕೂರು, ಜೋಕಟ್ಟೆ ಹಳ್ಳವೂ ಒಂದು. ಏಳೆಂಟು ಕಿ.ಮೀ. ವಿಶಾಲವಾಗಿ ಹರಡಿರುವ ಈ ಹಳ್ಳ ವರ್ಷವಿಡೀ ನೀರಿನಿಂದ ತುಂಬಿರುತ್ತಿದ್ದು, ಈ ಹಳ್ಳಗಳಲ್ಲಿ ಸ್ಥಳೀಯರು ಗಾಳ ಹಾಕಿ ಮೀನು ಹಿಡಿಯುವುದನ್ನೂ ಮಾಡುತ್ತಿದ್ದರು.
ಇಂದು ‘ವಾರ್ತಾಭಾರತಿ’ ತಂಡ ಈ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಫಲ್ಗುಣಿ ನದಿ ಸೇರುವ ತೋಕೂರು, ಜೋಕಟ್ಟೆ ಹಳ್ಳಗಳು ಸಂಪೂರ್ಣ ಮಲಿನಗೊಂಡಿರುವುದು ಕಂಡು ಬಂತು. ಮಾತ್ರವಲ್ಲದೆ, ತೋಕೂರು ಹಳ್ಳದ ಸೇತುವೆಯ ನೀರಿನಲ್ಲಿ ಹದ್ದುಗಳು ತ್ಯಾಜ್ಯಕ್ಕಾಗಿ ಕಿತ್ತಾಟ ನಡೆಸುತ್ತಿರುವುದೂ ಗೋಚರಿಸಿದವು.
ಹಳ್ಳದ ಮತ್ತೊಂದು ಭಾಗದಲ್ಲಿ ಕಾರ್ಮಿಕರು ತುಂಡಾದ ಪೈಪ್ ಬಳಿ ಕಾರ್ಮಿಕರು ಅಗೆಯುತ್ತಿದ್ದರು. ಈ ಬಗ್ಗೆ ಅಲ್ಲಿದ್ದವರನ್ನು ಪ್ರಶ್ನಿಸಿದಾಗ ಒಳಚರಂಡಿ ತ್ಯಾಜ್ಯ ಹರಿಯುವ ಪೈಪ್ ತುಂಡಾಗಿ ಸೋರಿಕೆಯಾಗುತ್ತಿದ್ದು, ಅದನ್ನು ಸರಿಪಡಿಸಲು ಯತ್ನಿಸುತ್ತಿರುತ್ತಿರುವುದಾಗಿ ಹೇಳಿದರು. ಆ ತ್ಯಾಜ್ಯ ನೀರಿನ ಪೈಪ್ ರಸ್ತೆಯ ಇನ್ನೊಂದು ಬದಿಯ ತೈಲ ಕಾರ್ಖಾನೆಯದ್ದು ಎಂದು ಅವರು ತಿಳಿಸಿದರು.
‘‘ತೋಕೂರು ಪ್ರದೇಶದ ಭೂಮಿಯನ್ನು ಎಸ್ಇಝೆಡ್ ಕಾರಿಡಾರ್ ರಸ್ತೆಗಾಗಿ ಭೂಮಿ ಸಮತಟ್ಟು ಮಾಡುವಾಗ ಸಹಜ ಹರಿವಿನ ಫಲ್ಗುಣಿ ನದಿ ನೀರಿನ ಮೂಲದ ಶೇ.50ರಷ್ಟು ಭಾಗ ಮಣ್ಣು ಹಾಕಿ ಮುಚ್ಚಲಾಗಿದೆ. ಇದೀಗ ಬೃಹತ್ ಕಾರ್ಖಾನೆಗಳ ಸಮೀಪದ ತೋಕೂರು ಹಳ್ಳ ಮಲಿನಗೊಂಡು ನಾರುತ್ತಿದೆ. ಈ ಮಾಲಿನ್ಯ ಅಲ್ಲಿಂದ ಅರ್ಧ ಕಿ.ಮೀ. ದೂರ ಹರಿದು ಫಲ್ಗುಣಿಯನ್ನು ಸೇರುತ್ತದೆ. ಪರಿಣಾಮ ಜೀವ ನದಿ ಫಲ್ಗುಣಿ ಕಣ್ಣ ಮುಂದೆ ಸಾಯುತ್ತಿದೆ. ಆದರೆ ಯಾರೂ ಇತ್ತ ಗಮನಹರಿಸುತ್ತಿಲ್ಲ. ಈಗಾಗಲೇ ಈ ಬಗ್ಗೆ ಪರಿಸರ ಮಾಲಿನ್ಯ ಇಲಾಖೆಗೆ ದೂರು ನೀಡಿದ್ದರೂ ಕ್ರಮ ಆಗಿಲ್ಲ’’ ಎನ್ನುತ್ತಾರೆ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ.
‘‘ಫಲ್ಗುಣಿ ನದಿಯ ಒಡಲನ್ನು ಸೇರುವ ಈ ತೋಕೂರು ಹಳ್ಳದ ನೀರು ಕಲುಷಿತಗೊಳ್ಳುತ್ತಿರುವ ಬಗ್ಗೆ ಇಲ್ಲಿನ ಕಾರ್ಖಾನೆಗಳಿಂದ ಕಲುಷಿತ ನೀರು ಈ ನದಿ ಮೂಲಕ್ಕೆ ಸೇರುತ್ತಿರುವ ಬಗ್ಗೆ ಈಗಾಗಲೇ ದೂರು ನೀಡಲಾಗಿದೆ. ಆದರೆ ಕಾರ್ಖಾನೆಗಳವರು ತಮ್ಮ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿಕೊಂಡು ಮರು ಬಳಕೆ ಮಾಡುವುದಾಗಿ ಹೇಳಿಕೊಂಡಿವೆ. ಹಾಗಿದ್ದಲ್ಲಿ ಈ ನೀರು ಕಲುಷಿತಗೊಳ್ಳಲು ಕಾರಣದ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆ. ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಳ್ಳಬೇಕು’’ ಎಂದು ಅವರು ಆಗ್ರಹಿಸಿದ್ದಾರೆ.
ಫಲ್ಗುಣಿ ನದಿ ಉಳಿಸಿ ಅಭಿಯಾನ
‘‘ಫಲ್ಗುಣಿ ನಮ್ಮ ಜೀವನದಿಗಳಲ್ಲಿ ಒಂದು. ಅದನ್ನು ಉಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಉತ್ತಮ ಮಂಗಳೂರಿಗಾಗಿ ಒಂದಾಗೋಣ ಎಂಬ ಧ್ಯೇಯ ವಾಕ್ಯದೊಂದಿಗೆ ಮಂಗಳೂರಿನ ನಾಗರಿಕರೆಲ್ಲ ಸೇರಿ ‘ಫಲ್ಗುಣಿ ಉಳಿಸಿ ಅಭಿಯಾನ’ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಜೀವನದಿಯ ರಕ್ಷಣೆಗಿಂತ ಮಿಗಿಲಾದ ಧರ್ಮವಿಲ್ಲ. ಈ ಬಗ್ಗೆ ಜನತೆ ಎಚ್ಚೆತ್ತು ಧ್ವನಿ ಎತ್ತಬೇಕಾಗಿದೆ. ಜಿಲ್ಲಾಡಳಿತ ಈಗಾಲಾದರೂ ಎಚ್ಚೆತ್ತು ಗಮನ ಹರಿಸಿ ಕ್ರಮ ಕೈಗೊಳ್ಳಬೇಕು’’ ಎನ್ನುತ್ತಾರೆ ಮುನೀರ್ ಕಾಟಿಪಳ್ಳ.
ಭಾರೀ ಪ್ರಮಾಣದಲ್ಲಿ ಮೀನುಗಳ ಸಾವು!
ಕಳೆದ ವರ್ಷ ನದಿ ನೀರು ಕಪ್ಪಾಗಿ ಸುದ್ದಿಯಲ್ಲಿದ್ದ ನಗರದ ಫಲ್ಗುಣಿ ನದಿಯಲ್ಲಿ ಮತ್ತೆ ಅದೇ ಪರಿಸ್ಥಿತಿ ಉಂಟಾಗಿದ್ದು ಕೂಳೂರು ಬ್ರಿಡ್ಜ್ನಿಂದ ಸಮುದ್ರದಂಚಿನವರೆಗೆ ಜಲಚರಗಳು ಸಾವನ್ನಪ್ಪಿದ್ದು ಪರಿಸರ ಕೊಳೆತು ನಾರುತ್ತಿದೆ. ಹೊಯ್ಗೆಬೈಲು, ಸುಲ್ತಾನ್ ಬತ್ತೇರಿ, ಬೋಳೂರಿನಲ್ಲಿ ನದಿದಡದಲ್ಲಿ ಡಾಂಬಾರಿನಂಥ ಪದರ ಹರಡಿದೆ. ಮಂಗಳೂರು ಮಹಾನಗರ ಪಾಲಿಕೆ ಚರಂಡಿ ನೀರು ಸಂಸ್ಕರಣೆಗೊಳಪಡದೆ ನೇರವಾಗಿ ನದಿಗೆ ಹರಿಯುತ್ತಿರುವ ಪರಿಣಾಮ ನೀರಲ್ಲಿ ವಿಷಯುಕ್ತ ಪದಾರ್ಥ ಸೇರಿಕೊಂಡಿದೆ. ನೀರಲ್ಲಿ ಆಮ್ಲಜನಕ ಕಡಿಮೆಯಾಗಿ ಕಳೆದ ಒಂದು ವಾರದಿಂದ ಭಾರೀ ಪ್ರಮಾಣದಲ್ಲಿ ಮೀನುಗಳು ಸಾವನ್ನಪ್ಪುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ಮಾಧ್ಯಮದ ಮಂದಿ ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭ ಹಲವಾರು ಚರಂಡಿಯ ಕೊಳಚೆ ನೀರು ನೇರವಾಗಿ ನದಿಗೆ ಹರಿಯುತ್ತಿರುವುದು ಕಂಡುಬಂದಿದೆ.
ಮಂಗಳೂರಿಗೆ ಮುಕುಟವಾಗಿರುವ ಜೀವ ನದಿಗಳು ಮಂಗಳೂರು ಮಹಾನಗರಪಾಲಿಕೆಯ ಅಸಡ್ಡೆಯಿಂದಲೇ ಹಾಳಾಗುತ್ತಿವೆ. ಚರಂಡಿ ನೀರು ನೇರವಾಗಿ ನದಿಗೆ ಹರಿಯುತ್ತಿದ್ದು ಪಾಲಿಕೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಹೀಗೇ ಮುಂದುವರಿದರೆ ನಮ್ಮ ಸುಂದರ ನಗರ ಸರ್ವನಾಶವಾಗುವುದರದಲ್ಲಿ ಸಂಶಯವಿಲ್ಲ.
ಶಶಿಧರ್ ಶೆಟ್ಟಿ, ಕಾರ್ಯದರ್ಶಿ, ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ