ಶಾಸಕ ಸುರೇಶ್‍ಬಾಬು ಸೇವಾ ಕಾರ್ಯ ಜನಪ್ರತಿನಿಧಿಗಳಿಗೆ ಮಾದರಿ : ಎಚ್.ಡಿ.ದೇವೇಗೌಡ
ಹುಳಿಯಾರು : ರೈತರ ಸಮಾವೇಶ
.jpg)
ಹುಳಿಯಾರು,ಜ.21:ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶ್‍ಬಾಬು ಅವರ ಸೇವಾ ಕಾರ್ಯ ಇತರ ಜನಪ್ರತಿನಿಧಿಗಳಿಗೆ ಮಾದರಿ ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಹುಳಿಯಾರಿನ ಎಂಪಿಎಸ್ ಶಾಲಾ ಆವರಣದಲ್ಲಿ ರವಿವಾರ ಜೆಡಿಎಸ್‍ನಿಂದ ಆಯೋಜಿಸಿದ್ದ ರೈತರ ಸಮಾವೇಶ ಉದ್ಘಾಟಿಸಿ ಮಾತನಾಡುತಿದ್ದ ಅವರು,ಶಾಸಕ ಸಿ.ಬಿ.ಸುರೇಶ್ ಬಾಬು ಅವರು ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡ 14 ರೈತರ ಕುಟುಂಬಗಳ ಜೀವನ ನಿರ್ವಹಣೆಗೆ ನೆರವಾಗುವ ನಿಟ್ಟಿನಲ್ಲಿ ಕುರಿಗಳು, ಹಸುಗಳನ್ನು ಕೊಡುವ ಮೂಲಕ ರಾಜ್ಯದಲ್ಲೇ ವಿನೂತನ ರೀತಿಯ ನೆರವಿನ ಹಸ್ತ ಚಾಚಿದ್ದಾರೆ.ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೂ ಕೂಡ ಇದೇ ಮಾದರಿಯಲ್ಲಿ ರೈತ ಕುಟುಂಬಗಳ ಜೀವನಕ್ಕಾಸರೆ ಆಗುವ ಯೋಜನೆಗಳನ್ನು ರೂಪಿಸಿದ್ದಾರೆ. ಇದೇ ಮಾದರಿಯಲ್ಲಿ ಜೆಡಿಎಸ್ ಪಕ್ಷದ ಎಲ್ಲಾ ಶಾಸಕರು, ಮಾಜಿ ಶಾಸಕರು ಸೇವಾಕಾರ್ಯ ಮಾಡಿದರೆ ಜೆಡಿಎಸ್ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ ಎಂದರು.
ಚುನಾವಣೆಯ ಹೊಸ್ತಿಲಲ್ಲಿ ಎರಡೂ ರಾಷ್ಟ್ರೀಯ ಪಕ್ಷದ ನಾಯಕರು ಸಮಾವೇಶಗಳನ್ನು ಮಾಡುತ್ತ ಒಬ್ಬರಿಗೊಬ್ಬರು ಕೀಳು ಮಟ್ಟದ ಭಾಷೆ ಬಳಸಿ ವೈಯಕ್ತಿಕ ನಿಂದನೆ ಮಾಡುತ್ತಿರುವುದು ಅಸಹ್ಯ ಹುಟ್ಟಿಸುತ್ತಿದೆ. ನಮಗೆ ವೈಯಕ್ತಿಕ ತೇಜೋವಧೆ ಮುಖ್ಯವಲ್ಲ ರಾಜ್ಯದ ಅಭಿವೃದ್ಧಿ ಮುಖ್ಯ. ಹಾಗಾಗಿಯೇ ಎಚ್.ಡಿ.ಕುಮಾರಸ್ವಾಮಿ ಅವರು ಮುಂದೆ ಮುಖ್ಯಮಂತ್ರಿಯಾದರೆ ರಾಜ್ಯದ ಅಭಿವೃದ್ದಿಗೆ ಕೈಗೊಳ್ಳುವ ಕಲ್ಯಾಣ ಕಾರ್ಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಒಟ್ಟಾರೆ ರಾಜ್ಯದ ಜನ ನೆಮ್ಮದಿಯಿಂದ ಬದುಕುವಂತೆ ಮಾಡುವುದೇ ಜೆಡಿಎಸ್ ಆಶಯವಾಗಿದೆ ಎಂದು ದೇವೇಗೌಡರು ನುಡಿದರು.
ನಾನು ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಬೀದರ್ ನಿಂದ ಶ್ರೀರಂಗಪಟ್ಟಣದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿದ್ದೆ.ಆದರೆ 20 ವರ್ಷಗಳು ಕಳೆದರೂ ಯೋಜನೆ ಇನ್ನೂ ಪೂರ್ಣಗೊಂಡಿಲ್ಲದಿರುವುದು ನೋವಿನ ಸಂಗತಿಯಾಗಿದೆ. ಇನ್ನು ರಾಜ್ಯದ ಕೃಷಿ ಮತ್ತು ರೈತರ ದುಸ್ಥಿತಿಯ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಿ ಪ್ರಧಾನಿಗಳಿಗೆ ಖುದ್ದು ಹೋಗಿ ವಿವರಿಸಿ ಬಂದಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ ಕರಾವಳಿಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಕಿತ್ತಾಟದಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ. ಇಲ್ಲಿ ಸಾಮರಸ್ಯ ಮೂಡಿಸಿ ಶಾಂತಿ ನೆಲೆಸುವಂತೆ ಮಾಡುವ ಅಗತ್ಯವಿದ್ದು ಹತ್ಯೆಯಾದ ಕುಟುಂಬಗಳಿಗೆ ಪಕ್ಷದಿಂದ ಧನ ಸಹಾಯ ಸಹ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಿ.ಚೆನ್ನಿಗಪ್ಪ ಅಧ್ಯಕ್ಷತೆ ವಹಿಸಿದ್ದರು. ಇಸ್ರೇಲ್ ದೇಶದ ಕೃಷಿ ವ್ಯವಸ್ಥೆ ಬಗ್ಗೆ ಶಾಸಕ ವೈ.ಎಸ್.ವಿ ದತ್ತ ಅವರು ಮಾಹಿತಿ ನೀಡಿದರು. ಶಾಸಕ ಸಿ.ಬಿ.ಸುರೇಶ್‍ಬಾಬು, ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ರೈತ ಜನತಾದಳದ ರಾಜ್ಯಾಧ್ಯಕ್ಷ ಗಂಗಾಧರ್ ಪಾಟೀಲ್ ಕುಲಕರ್ಣಿ, ಮಾಜಿ ಶಾಸಕ ಸತ್ಯನಾರಾಯಣ್, ತಿಪಟೂರು ಲೋಕೇಶ್ವರ್, ಅಂಜಿನಪ್ಪ, ಜಿಪಂ ಸದಸ್ಯರುಗಳಾದ ಕಲ್ಲೇಶ್, ರಾಮಚಂದ್ರಯ್ಯ, ಚಂದ್ರಶೇಖರಶೆಟ್ಟಿ, ಶಿವಪ್ರಕಾಶ್, ಸಿ.ಡಿ.ಚಂದ್ರಶೇಖರ್, ಹೊನ್ನಮ್ಮ, ಶೇಕರಪ್ಪ ಮತ್ತಿತರರು ಉಪಸ್ಥಿತರಿದ್ದರು.







