ಚಾಮರಾಜನಗರಕ್ಕೆ ಅಟ್ಟಿಕೊಂಡಿದ್ದ ಶಾಪ ವಿಮೋಚನೆಯಾಗಿಲ್ಲ: ಶೋಭಾ ಕರಂದ್ಲಾಜೆ
ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಪರಿವರ್ತನಾ ಯಾತ್ರೆ

ಚಾಮರಾಜನಗರ,ಜ.21: ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಗಡಿ ಚಾಮರಾಜನಗರ ಜಿಲ್ಲೆಗೆ ಆಗಮಿಸಿ ಜಿಲ್ಲೆಯ ನೂತನ ಹನೂರು ತಾಲ್ಲೂಕಿನಲ್ಲಿ ಸಾರ್ವಜನಿಕರ ಬಹಿರಂಗ ಸಭೆ ನಡೆಸಿತು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ನವ ಕರ್ನಾಟಕ ಪರಿವರ್ತನಾ ಯಾತ್ರೆ ಶನಿವಾರ ರಾತ್ರಿ ಗಡಿ ಚಾಮರಾಜನಗರ ಜಿಲ್ಲೆಗೆ ಆಗಮಿಸಿತು. ಕೊಳ್ಳೇಗಾಲ ಮಾರ್ಗವಾಗಿ ಹನೂರಿಗೆ ಆಗಮಿಸಿದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಪರಿವರ್ತನಾ ಯಾತ್ರೆಯು ಹನೂರಿನ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಯಿತು.
ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದರು.
ಮಲೆ ಮಹದೇಶ್ವರ ನೆಲೆಸಿರುವ ಮಹದೇಶ್ವರ ಬೆಟ್ಟಕ್ಕೆ ಉತ್ತಮ ರಸ್ತೆ ಮಾಡಲಾಗದ ಸರ್ಕಾರ ಅಭಿವೃದ್ದಿ ಎಲ್ಲಿ ಮಾಡಿದೆ, ಯಾವುದೇ ಯೋಜನೆಗಳಿಗೆ ಹಣ ಬಿಡುಗಡೆ ಮಾಡುತ್ತಾ ಇಲ್ಲಾ ಹಾಗಾದ್ರೆ ಸರ್ಕಾರದ ಹಣ ಏನಾಯ್ತು ಸಿದ್ದರಾಮಯ್ಯ ರವರೇ ಎಂದು ಪ್ರಶ್ನೆ ಮಾಡಿದರು.
ಯಾವುದೇ ಅಭಿವೃದ್ದಿ ಮಾಡದ ಸಿದ್ದರಾಮಯ್ಯ ರವರು ದೇವಾಲಯಗಳಿಗೆ ಭೇಟಿ ನೀಡಿ ನಾಸ್ತಿಕರಾಗುವುದರ ಜೊತೆ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ದೇಶಕ್ಕೆ ಅತ್ಯುತ್ತಮ ಸಂವಿಧಾನ ರಚಿಸಿಕೊಟ್ಟ ಅಂಬೇಡ್ಕರ್ ನಿಧನರಾದಾಗ ದೆಹಲಿಯಲ್ಲಿ ಶವ ಸಂಸ್ಕಾರಕ್ಕೆ ಅವಕಾಶ ಕೊಡದೆ ಅವಮಾನ ಮಾಡಿದ ಕಾಂಗ್ರೆಸ್ ನಿಂದ ಸಮಾನತೆ ಎಲ್ಲಿದೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ದೇಶದ ಎಲ್ಲರೂ ಸಮಾನತೆಯಿಂದ ಸಹಭಾಳ್ವೆ ಜೀವನ ನಡೆಸಬೇಕೆಂದು ಅದೇ ಮಾದರಿಯಲ್ಲಿ ತಾನು ಕೂಡ ಕರ್ನಾಟಕದ ಜನತೆಯೂ ಸಮಾನತೆಯಿಂದ ಸಹಬಾಳ್ವೆ ನಡೆಸಬೇಕೆಂಬುದೇ ನನ್ನ ಬಯಕೆ ಎಂದು ಯಡಿಯೂರಪ್ಪ ಹೇಳಿದರು.
ರಾಜ್ಯದ ಎಲ್ಲಾ ಕೆರೆಗಳಿಗೆ ನದಿ ಮೂಲದಿಂದ ನೀರು ಹರಿಸುವುದು, ರೈತರ ಹಿತ ಕಾಪಾಡುವುದು ಎಲ್ಲಾ ವರ್ಗದವರಿಗೂ ಅನುಕೂಲ ಮಾಡಿಕೊಡುವುದು ತಮ್ಮ ನಿಲುವಾಗಿದ್ದು ಜನಾದೇಶಕ್ಕಾಗಿ ನವ ಕರ್ನಾಟಕ ಪರಿವರ್ತನಾ ಯಾತ್ರೆ ನಡೆಸಿದ್ದೇವೆ ಎಂದರು.
ಮಾಜಿ ಸಚಿವೆ ಹಾಗೂ ಸಂಸದೆ ಶೋಭಾಕರಂದ್ಲಾಜೆ ಮಾತನಾಡಿ, ಚಾಮರಾಜನಗರಕ್ಕೆ ಅಂಟಿಕೊಂಡಿರುವ ಶಾಪ ವಿಮೋಚನೆಯಾಗಿದೆ ಎಂದು ಮುಖ್ಯಮಂತ್ರಿಗಳು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ ಆದರೆ ಚಾಮರಾಜನಗರ ಇನ್ನೂ ಶಾಪಗ್ರಸ್ತವಾಗಿಯೇ ಇದೆ. ಈ ಜಿಲ್ಲೆಯಲ್ಲಿ ಅಭಿವೃದ್ದಿಯಾದರೆ ಮಾತ್ರ ಶಾಪ ವಿಮೋಚನೆಯಾಗಲಿದೆ ಅದು ಯಡಿಯೂರಪ್ಪರವರಿಂದ ಸಾಧ್ಯ ಎಂದು ಹೇಳಿದರು.
ಹನೂರಿನ ಶಾಸಕರು ಎರಡು ಭಾರಿ ಶಾಸಕರಾಗಿದ್ದಾರೆ. ಕ್ಷೇತ್ರಕ್ಕೆ ಏನು ಅಭಿವೃದ್ದಿ ಕೆಲಸ ಮಾಡಿದ್ದಾರೆ ಎಂದರೆ ಅದು ಶೂನ್ಯವಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಚಾಮರಾಜನಗರ ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಇಲ್ಲದೇ ಇದ್ದರೂ ಜಿಲ್ಲೆಯ ಅಭಿವೃದ್ದಿಗೆ ಅನುದಾನ ನೀಡಿದ್ದಾರೆ, ಮಹದೇಶ್ವರ ಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹೀಗೆ ಹಲವಾರು ದೇವಸ್ಥಾನಗಳಿಂದ ಬಂದ ಬೇಡಿಕೆಗಳಿಗೆ ಸ್ಪಂದನೆ ನೀಡಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪರಿಗೆ ಅಭಿಮಾನಿಗಳು ನಂದಿ ವಿಗ್ರಹ ನೀಡಿ ಸನ್ಮಾನಿಸಿದರು. ಮಾಜಿ ಸಚಿವ ಸಿ.ಪಿ ಯೋಗೇಶ್ವರ್, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕಿ ಪರಿಮಳನಾಗಪ್ಪ, ಮಾಜಿ ಸಂಸದ ಶಿವಣ್ಣ, ಮಾಜಿ ಸಚಿವ ಎಸ್ ಎ ರಾಮದಾಸ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರೋ.ಕೆ.ಆರ್. ಮಲ್ಲಿಕಾರ್ಜುನಪ್ಪ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿರಿದ್ದರು.







