ಸಂಪೂರ್ಣ ವಿದೇಶಿ ಮಾಲಕತ್ವ: ಖಾಸಗಿ ಬ್ಯಾಂಕ್‌ಗಳು ಗೊಂದಲದಲ್ಲಿ

ಮುಂಬೈ, ಜ.21: ಸರಕಾರವು ಖಾಸಗಿ ಬ್ಯಾಂಕ್‌ಗಳ ಮೇಲಿನ ವಿದೇಶಿ ಹಿಡಿತದ ಮಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕಲಿದೆ ಎಂಬ ಊಹಾಪೋಹವು ಖಾಸಗಿ ಬ್ಯಾಂಕ್‌ಗಳ ಮಧ್ಯೆಯೇ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.
ಕೆಲವು ಖಾಸಗಿ ಬ್ಯಾಂಕ್‌ಗಳು ಈ ಪ್ರಸ್ತಾಪವನ್ನು ಸ್ವಾಗತಿಸಿದ್ದರೆ ಇನ್ನು ಕೆಲವು ಬ್ಯಾಂಕ್‌ಗಳು ಈ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿವೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ. ಬ್ಯಾಂಕಿಂಗ್ ಕ್ಷೇತ್ರವು ಆರ್ಥಿಕತೆಗೆ ಪೂರಕವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಮೊದಲು ತೀರ್ಮಾನಿಸಬೇಕು. ಅದು ಆರ್ಥಿಕತೆಗೆ ಪೂರಕವಾಗಿದ್ದರೆ ಅದರಿಂದ ಬರುವ ಎಲ್ಲಾ ಆದಾಯವನ್ನು ರಫ್ತು ಮಾಡಲು ನೀವು ಬಯಸುತ್ತೀರಾ? ಎಂದು ಕೋಟಕ್ ಮಹೀಂದ್ರ ಬ್ಯಾಂಕ್‌ನ ಜಂಟಿ ವ್ಯವಸ್ಥಾಪನಾ ನಿರ್ದೇಶಕರಾದ ದೀಪಕ್ ಗುಪ್ತಾ ಪ್ರಶ್ನಿಸಿದ್ದಾರೆ. “ನಮಗೆ ಇಷ್ಟವಿರಲಿ, ಇಲ್ಲದಿರಲಿ ಒಂದು ಆರ್ಥಿಕತೆಯು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದಕ್ಕೆ ಬ್ಯಾಂಕಿಂಗ್ ಪ್ರಮುಖವಾಗುತ್ತದೆ. ಹಾಗಾಗಿ ಅದರಲ್ಲಿ 100 ಶೇಕಡಾ ವಿದೇಶಿ ಮಾಲಕತ್ವ ಹೊಂದುವಂತೆ ಮಾಡುವುದು ಸಮಂಜಸವಲ್ಲ” ಎಂದು ಅವರು ವಿವರಿಸಿದ್ದಾರೆ. ಆದರೆ ಈ ನಡೆಯನ್ನು ಯೆಸ್ ಬ್ಯಾಂಕ್‌ನ ರಾಣಾ ಕಪೂರ್ ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ. ನನ್ನ ಪ್ರಕಾರಇದು ಉತ್ತಮ ಹೆಜ್ಜೆ. ಈಗಾಗಲೇ ಎರಡು ಮೂರು ಬ್ಯಾಂಕ್‌ಗಳು 74 ಶೇಕಡಾ ವಿದೇಶಿ ಮಾಲಕತ್ವವನ್ನು ಹೊಂದಿವೆ. ಮಾರುಕಟ್ಟೆಯನ್ನು ತೆರೆದುಕೊಳ್ಳಲು ಇದೊಂದು ಉತ್ತಮ ನಡೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ದೇಶದ ಮೌಲ್ಯಯುತ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಈ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಸದ್ಯ ಯಾವುದು ಕೂಡಾ ಅಂತಿಮವಾಗಿರದೆ ಇರುವ ಕಾರಣ ಈ ಬಗ್ಗೆ ಏನನ್ನೂ ಹೇಳುವುದಿಲ್ಲ ಎಂದು ಎಚ್‌ಡಿಎಫ್‌ಸಿಯ ಸಹಾಯಕ ವ್ಯವಸ್ಥಾಪನಾ ನಿರ್ದೇಶಕರಾದ ಪರೇಶ್ ಸುತಂಕರ್ ತಿಳಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ನರೇಂದ್ರ ಮೋದಿ ಸರಕಾರವು ಖಾಸಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 100 ಶೇಕಡಾ ನೇರ ವಿದೇಶಿ ಬಂಡವಾಳ ಹೂಡಿಕೆಗೆ ಅನುಮತಿ ನೀಡಲು ಚಿಂತನೆ ನಡೆಸುತ್ತಿದೆ. ಸದ್ಯ ಖಾಸಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿಯು 74 ಶೇಕಡಾ ಆಗಿದ್ದು ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ಈಗಾಗಲೇ ಅತೀಹೆಚ್ಚಿನ ಮಿತಿಯನ್ನು ಹೊಂದಿವೆ. ಕೆಟ್ಟ ಸಾಲ ಮತ್ತು ಅದರಿಂದ ಉಂಟಾಗುತ್ತಿರುವ ನಷ್ಟದಿಂದಾಗಿ ನಿಕೃಷ್ಟ ಬಂಡವಾಳ ಹೊಂದಿ ಸದ್ಯ ಸಂಕಷ್ಟದಲ್ಲಿರುವ ಸರಕಾರಿ ಬ್ಯಾಂಕ್‌ಗಳಲ್ಲೂ ಸದ್ಯವಿರುವ 20 ಶೇಕಡಾ ಎಫ್‌ಡಿಐಯನ್ನು 49 ಶೇಕಡಾಕ್ಕೆ ಏರಿಸುವ ಚಿಂತನೆಯನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ಇತ್ತೀಚಿನ ಮಾಧ್ಯಮ ವರದಿಗಳು ತಿಳಿಸಿವೆ.