ಹಸುಗಳ ಸಾವು: ಮಧ್ಯಪ್ರದೇಶದಲ್ಲಿ ಆರೋಪ- ಪ್ರತ್ಯಾರೋಪ
ನಿರ್ಲಕ್ಷ್ಯ, ನೈರ್ಮಲ್ಯದ ಕೊರತೆ ಎಂದ ಪಾಲಿಕೆ - ಅನುದಾನದ ಕೊರತೆ ಎನ್ನುತ್ತಿದೆ ಪಶು ಸಂವರ್ಧನ ಕೇಂದ್ರ

ಭೋಪಾಲ್, ಜ.22: ಎರಡು ವರ್ಷಗಳ ಕಾಲ ಬೀದಿಹಸುಗಳ ಸಮೀಕ್ಷೆ ನಡೆಸಿದ ಬಳಿಕ ಇದೀಗ ಜಬಲ್ಪುರ ಪಾಲಿಕೆ ಅಧಿಕಾರಿಗಳಿಗೆ ಹೊಸ ಸಮಸ್ಯೆ ಎದುರಾಗಿದೆ. ಇದೀಗ ಮೂರನೇ ಒಂದರಷ್ಟು ಹಸುಗಳು ಕಣ್ಮರೆಯಾಗಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ದಯೋದಯ ಪಶು ಸಂವರ್ಧನ ಕೇಂದ್ರ ನಡೆಸುವ ಸ್ಥಳೀಯ ಗೋಶಾಲೆಯಲ್ಲಿ 1,770 ಹಸುಗಳನ್ನು ಪಾಲಿಕೆ ವತಿಯಿಂದ 2016ರಲ್ಲಿ ಬಿಡಲಾಗಿತ್ತು. ಆದರೆ ಈಗ ಅವುಗಳ ಪೈಕಿ 1,013 ಮಾತ್ರ ಉಳಿದುಕೊಂಡಿವೆ. ಉಳಿದವು ನಿರ್ಲಕ್ಷ್ಯ, ನೈರ್ಮಲ್ಯದ ಕೊರತೆ ಹಾಗೂ ರೋಗದಿಂದ ಸತ್ತಿವೆ ಎನ್ನುವುದು ಅಧಿಕಾರಿಗಳ ಆರೋಪ.
ಆದರೆ ಕೇಂದ್ರದ ಅಧ್ಯಕ್ಷ ಎಂ.ಪಿ.ಜೈನ್ ಇದನ್ನು ನಿರಾಕರಿಸಿದ್ದು, ಅನುದಾನದ ಕೊರತೆ ಮತ್ತು ವೈದ್ಯಕೀಯ ನೆರವಿನ ಕೊರತೆ ಇದಕ್ಕೆ ಕಾರಣ ಎನ್ನುತ್ತಾರೆ. ದೇಶಾದ್ಯಂತ ಇಂಥ 142 ಗೋಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ನಿರ್ವಹಣೆ ಕಷ್ಟಸಾಧ್ಯವಾಗಿದೆ ಎನ್ನುವುದು ಅವರ ವಾದ.
ರಾಜ್ಯದಿಂದ ಪ್ರತೀ ಹಸುವಿಗೆ ತಿಂಗಳಿಗೆ ಕೇವಲ 1.5 ರೂ. ಮಾತ್ರ ಅನುದಾನ ಸಿಗುತ್ತದೆ. ಆದರೆ ನಾವು ಸುಮಾರು 50 ರೂ. ಖರ್ಚು ಮಾಡುತ್ತೇವೆ. ವೈದ್ಯಕೀಯ ಸೌಲಭ್ಯವಂತೂ ಇಲ್ಲ. ಹಸಿರು ಹುಲ್ಲನ್ನೂ ನಾವೇ ಬೆಳೆದುಕೊಳ್ಳಬೇಕಾದ ಸ್ಥಿತಿ ಇದೆ ಎಂದು ಅವರು ಹೇಳುತ್ತಾರೆ.
17 ಎಕರೆಯ ಗೋಶಾಲೆಯನ್ನು ಎರಡು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಒಂದು ಗೋಶಾಲೆಯ ಹಸುಗಳಿಗಾಗಿ ಮತ್ತು ಇನ್ನೊಂದು ಇತರ ಪ್ರಾಣಿಗಳಿಗಾಗಿ. ಮೊದಲ ವಿಭಾಗ ಅತ್ಯುತ್ತಮವಾಗಿದ್ದರೆ, ಎರಡನೇ ವಿಭಾಗದಲ್ಲಿ ನೈರ್ಮಲ್ಯ ಕೊರತೆ ಇರುವುದು ಕಂಡುಬಂತು. ಗೋಶಾಲೆ ದಾನಿಗಳಿಂದ ನೆರವು ಸಂಗ್ರಹಿಸಿ ಮಾಸಿಕ 9 ಲಕ್ಷ ರೂ. ವೆಚ್ಚ ಮಾಡುತ್ತಿದೆ. ದಾನಿಗಳಿಗೆ ತಾಜಾ ಹಾಲು ವಿತರಿಸಲಾಗುತ್ತಿದೆ ಎಂದು ಗೋಶಾಲೆಯ ಸಿಬ್ಬಂದಿ ವಿವರಿಸಿದ್ದಾರೆ.
ಬಹುತೇಕ ಹಸುಗಳು ಪ್ಲಾಸ್ಟಿಕ್ ವಿಷಪ್ರಾಶನದಿಂದ ಸತ್ತಿದ್ದು, ಯಾವುದೇ ವೈದಕೀಯ ನೆರವು ಸಿಕ್ಕಿಲ್ಲ ಎನ್ನುವುದು ಜೈನ್ ಆರೋಪ. ಮಧ್ಯಪ್ರದೇಶದಲ್ಲಿ 20 ದಶಲಕ್ಷ ಹಸುಗಳಿದ್ದು, ಇತ್ತೀಚಿನ ದಿನಗಳಲ್ಲಿ ಬೀಡಾಡಿಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಅಂಕಿಸಂಖ್ಯೆ ಇಲ್ಲ. ರಾಜ್ಯದಲ್ಲಿ ಕಟ್ಟುನಿಟ್ಟಿನ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ರೈತರು ಮುದಿ ಹಸುಗಳನ್ನು ಬೀದಿಗೆ ಬಿಡುವ ಪ್ರವೃತ್ತಿ ಹೆಚ್ಚುತ್ತಿದೆ.