ಲೋಯಾ ಶಂಕಾಸ್ಪದ ಸಾವು ಪ್ರಕರಣ: ಸುಪ್ರೀಂ ಕೋರ್ಟ್ ನಲ್ಲಿ ಇಂದು ವಿಚಾರಣೆ

ಹೊಸದಿಲ್ಲಿ, ಜ.22: ಸಿಬಿಐ ಜಡ್ಜ್ ನ್ಯಾಯಮೂರ್ತಿ ಬ್ರಿಜ್ ಗೋಪಾಲ್ ಹರ್ ಕಿಶನ್ ಲೋಯಾ ನಿಗೂಢ ಸಾವು ಪ್ರಕರಣದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸೋಮವಾರ ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಪ್ರಕರಣದ ವಿಚಾರಣೆಯನ್ನು ಆರಂಭಿಸಲಿದೆ.
ಲೋಯ ಸಾವಿನ ಸ್ವತಂತ್ರ ತನಿಖೆಗೆ ಒತ್ತಾಯಿಸಿ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. 2014ರ ಡಿಸೆಂಬರ್ 1ರಂದು ನ್ಯಾಯಮೂರ್ತಿ ಲೋಯ ಮೃತಪಟ್ಟಿದ್ದರು. ಅವರ ಶಂಕಾಸ್ಪದ ಸಾವಿನ ಬಗ್ಗೆ ಮಹಾರಾಷ್ಟ್ರ ಮೂಲದ ಪತ್ರಕರ್ತ ಬಿ.ಆರ್. ಲೋನ್ ಸೇರಿದಂತೆ ಮೂವರು ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದರು.
ನ್ಯಾಯಮೂರ್ತಿ ಲೋಯಾ ಅವರು ವಿಚಾರಣೆ ನಡೆಸುತ್ತಿದ್ದ ಸೊಹ್ರಾಬುದ್ದೀನ್ ಎನ್ಕೌಂಟರ್ ಪ್ರಕರಣದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಹಲವು ಪೊಲೀಸ್ ಅಧಿಕಾರಿಗಳು ಆರೋಪಿಗಳಾಗಿದ್ದರು. ಈ ಕಾರಣದಿಂದಾಗಿ ಅವರ ಸಾವಿನ ಬಗ್ಗೆ ಅನುಮಾನ ಕಂಡು ಬಂದಿತ್ತು.
ಈ ಪ್ರಕರಣದ ವಿಚಾರಣೆಯ ಹಂಚಿಕೆಯ ವಿಚಾರದಲ್ಲಿ ಮುಖ್ಯನ್ಯಾಯಮೂರ್ತಿಯ ನಿರ್ಧಾರದ ಹಿನ್ನೆಲೆಯಲ್ಲಿ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಸಿಜೆಐ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು.