13,660 ಕಿ.ಮೀ. ಉದ್ದದ ಮಾನವ ಸರಪಳಿ ನಿರ್ಮಿಸಿದ 4 ಕೋಟಿ ಜನರು!
ಇದರ ಹಿಂದಿನ ಉದ್ದೇಶವೇನು?

ಪಾಟ್ನಾ, ಜ.22: ಬಿಹಾರದಲ್ಲಿ ಸುಮಾರು 4 ಕೋಟಿ ಜನರು ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದಿದ್ದಾರೆ. ರಾಜ್ಯಾದ್ಯಂತ ವಿವಿಧೆಡೆಗಳಲ್ಲಿ ನಡೆದ ಈ ಕಾರ್ಯಕ್ರಮದ ಮಾನವ ಸರಪಳಿ ಸುಮಾರು 13,660 ಕಿ.ಮೀ. ಉದ್ದವಿತ್ತು.
ನಿತೀಶ್ ಕುಮಾರ್ ಸರಕಾರದ ಕರೆಯಂತೆ ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ, ಬಾಲ್ಯವಿವಾಹದ ವಿರುದ್ಧ ಈ ಕಾರ್ಯಕ್ರಮ ನಡೆದಿದ್ದು, 38 ಜಿಲ್ಲೆಗಳ ಜನರು ಇದರಲ್ಲಿ ಪಾಲ್ಗೊಂಡಿದ್ದು, 13,660 ಕಿ.ಮೀ. ಉದ್ದದ ಮಾನವ ಸರಪಳಿಯನ್ನು ರಚಿಸಲಾಗಿತ್ತು.
ಮಧ್ಯಾಹ್ನ 12ರಿಂದ 12:30ರವರೆಗೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು 4 ಕೋಟಿ ಜನರು ಭಾಗವಹಿಸಿದ್ದರು ಎಂದು ಅಂದಾಜಿಸಲಾಗಿದೆ. ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ನಿತೀಶ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಈ ಸಂದರ್ಭ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಸೇರಿದಂತೆ ಹಲವು ಶಾಸಕರು ಹಾಗು ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
“ಸಾಮಾಜಿಕ ಪಿಡುಗುಗಳಾದ ಬಾಲ್ಯ ವಿವಾಹ ಹಾಗು ವರದಕ್ಷಿಣೆ ಸಮಸ್ಯೆಗಳ ವಿರುದ್ಧದ ಮಾನವ ಸರಪಳಿಯಲ್ಲಿ ಪಾಲ್ಗೊಂಡಿದ್ದಕ್ಕೆ ನಾನು ಬಿಹಾರದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದು ನಿತೀಶ್ ಕುಮಾರ್ ಹೇಳಿದರು.