ಎಸ್‍ಡಿಪಿಐನಂತ ದೇಶದ್ರೋಹಿ ಸಂಘಟನೆಯೊಂದಿಗೆ ಕೈಜೋಡಿಸಿದ ಕಾಂಗ್ರೆಸ್ ಸರ್ಕಾರ : ಪ್ರಕಾಶ್ ಜಾವಡೇಕರ್

ಚಿಕ್ಕಮಗಳೂರು, ಜ.22: ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಎಸ್‍ಡಿಪಿಐನಂತಹ ದೇಶದ್ರೋಹಿ ಸಂಘಟನೆಯೊಂದಿಗೆ ಕೈಜೋಡಿಸುತ್ತಿದ್ದು, ಆ ಪಕ್ಷವನ್ನು ದೇಶದಿಂದಲೇ ಕಿತ್ತೊಗೆಯಬೇಕಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.
ಅವರು ಸೋಮವಾರ ನಗರದ ಬಿಜೆಪಿ ಕಛೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಬಿಜೆಪಿ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಭ್ರಷ್ಟಾಚಾರ ಎಂದರೆ ಕಾಂಗ್ರೆಸ್ ಎಂದ ಅವರು, ಅಭಿವೃದ್ದಿಯನ್ನೇ ಮೂಲ ಮಂತ್ರವನ್ನಾಗಿಸಿಕೊಂಡಿರುವ ಏಕೈಕ ಪಕ್ಷ ಅದು ಬಿಜೆಪಿ. ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಬಿಜೆಪಿ ಕಾರ್ಯಕರ್ತರು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು.
ಮೊದಲು ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರು ಜಿಲ್ಲೆ ನಂತರ ಕಾಂಗ್ರೆಸ್ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಬಿಜೆಪಿ ಮುಖಂಡರು ಸ್ಥಳೀಯ ಸಮಸ್ಯೆಗಳ ಬಗ್ಗೆ ನಿರಂತರ ಹೋರಾಟ ಮಾಡಿ, ಜನಮನ್ನಣೆ ಗಳಿಸಿದ ಪರಿಣಾಮವಾಗಿ ಇಂದು ಜಿಲ್ಲೆ ಬಿಜೆಪಿಯ ಕೈವಶವಾಗಿದೆ ಎಂದು ಹೇಳಿದರು.
ರಾಜ್ಯದ ಆಡಳಿತಾರೂಢ ಕಾಂಗ್ರೆಸ್‍ನ ರೈತ ವಿರೋಧಿ ನೀತಿಯಿಂದ ರೈತರು ನಿರಂತರವಾಗಿ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ ಎಂದ ಅವರು, ಕಳೆದ 2 ವರ್ಷಗಳಿಂದ ಜಿಲ್ಲೆ ಬರ ಪರಿಸ್ಥಿತಿ ಎದುರಿಸುತ್ತಿದ್ದು, ಅಡಿಕೆ, ತೆಂಗು, ಮೆಣಸು ಬೆಳೆಗಳು ನೆಲಕಚ್ಚಿವೆ. ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದರು.
ಶಾಸಕ ಸಿ.ಟಿ. ರವಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೈತಿಕ ಬಲವಿಲ್ಲದೇ ವಾಮಮಾರ್ಗದಲ್ಲಿ ಗೆಲ್ಲುವ ಹುನ್ನಾರ ನಡೆಸುತ್ತಿದೆ. ಬಿಜೆಪಿ ಕುಟುಂಬ ಕೇಂದ್ರಿತ, ಜಾತಿ ಕೇಂದ್ರಿತ ಪಕ್ಷವಲ್ಲ. ಇದು ಸಿದ್ದಾಂತ ಕೇಂದ್ರಿತ ಪಕ್ಷ ಎಂದ ಅವರು, ಆಡಳಿತಾರೂಢ ಕಾಂಗ್ರೇಸ್ ಸರ್ಕಾರ ಜಾತಿ, ಭೀತಿ ಹಾಗೂ ಹಣವನ್ನು ಗುರಾಣಿಯನ್ನಾಗಿಸಿಕೊಂಡು ಚುನಾವಣೆಯನ್ನು ಗೆಲ್ಲುವ ತಂತ್ರ ನಡೆಸುತ್ತಿದೆ. ಆದರೆ ಬಿಜೆಪಿ ಕಾರ್ಯಕರ್ತರ ಬಲದಿಂದ ಗೆಲ್ಲಲಿದೆ ಎಂದು ಹೇಳಿದರು.
ಇತ್ತೀಚೆಗೆ ನಡೆದ ಸಭೆಯೊಂದರಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ನವರು ಪಾಂಡವರು, ಬಿಜೆಪಿಯವರು ಕೌರವರು ಎಂದು ಹೇಳಿದ್ದಾರೆ, ಪಾಂಡವರ ತಲೆ ಕಾಯ್ದ ಉಡುಪಿಯಲ್ಲಿರುವ ಕೃಷ್ಣನನ್ನು ನೋಡಲು ಹೋಗದ ಸಿದ್ದರಾಮಯ್ಯ ಪಾಂಡವರು ಹೇಗಾಗುತ್ತಾರೆ ಎಂದು ಪ್ರಶ್ನಿಸಿದರು.
ವೇದಿಕೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್.ಜೀವರಾಜ್, ಎಂಎಲ್‍ಸಿ ಎಂ.ಕೆ.ಪ್ರಾಣೇಶ್, ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಭೋಜೇಗೌಡ, ಮಾಜಿ ಶಾಸಕರಾದ ಡಾ.ವಿಶ್ವನಾಥ್, ಎಂ.ಪಿ.ಕುಮಾರಸ್ವಾಮಿ, ಸುರೇಶ್ ಉಪಸ್ಥಿತರಿದ್ದರು.
'ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ. ಈಗಾಗಲೇ ದೇಶದ ಬಹುತೇಕ ರಾಜ್ಯಗಳನ್ನು ಬಿಜೆಪಿ ಕೈವಶ ಮಾಡಿಕೊಂಡಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‍ನೊಂದಿಗೆ ಜೆಡಿಎಸ್‍ನ್ನು ಸಹ ಮುಕ್ತಗೊಳಿಸಲು ಕಾರ್ಯತಂತ್ರ ರೂಪಿಸಬೇಕು’
-ಪ್ರಕಾಶ್ ಜಾವಡೇಕರ್







