ಮಲ ಹೊರುವ ಪದ್ಧತಿ: 2017ರಲ್ಲಿ ಸಾವನ್ನಪ್ಪಿದ ಕಾರ್ಮಿಕರ ಸಂಖ್ಯೆಯೆಷ್ಟು?

ಹೊಸದಿಲ್ಲಿ, ಜ.22: ಭಾರತದಲ್ಲಿ ಮನುಷ್ಯರಿಂದ ಮಲವನ್ನು ಹೊರಿಸುವ ಕಾರ್ಯಕ್ಕೆ ನಿಷೇಧವಿದ್ದರೂ, 2017ರಲ್ಲಿ ದೇಶಾದ್ಯಂತ ವರದಿಯಾದ ಪ್ರಕರಣಗಳಲ್ಲಿ ಮುನ್ನೂರಕ್ಕೂ ಅಧಿಕ ಮಲಹೊರುವ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಕಳೆದ ಡಿಸೆಂಬರ್‌ನಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಲೋಕಸಭೆಯಲ್ಲಿ ತಿಳಿಸಿದೆ.
ತಮಿಳುನಾಡಿನಲ್ಲಿ ಅತೀಹೆಚ್ಚು ಅಂದರೆ 140 ಸಾವಿನ ಪ್ರಕರಣಗಳು ವರದಿಯಾಗಿದ್ದರೆ ಕರ್ನಾಟಕದಲ್ಲಿ 59 ಮಲಹೊರುವ ಕಾರ್ಮಿಕರು 2017ರಲ್ಲಿ ಮೃತಪಟ್ಟಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಉತ್ತರ ಪ್ರದೇಶದಲ್ಲಿ 52 ಮತ್ತು ದಿಲ್ಲಿಯಲ್ಲಿ 12 ಮಲಹೊರುವ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಅಷ್ಟು ಮಾತ್ರವಲ್ಲ, 2014ರಿಂದೀಚೆಗೆ ಸರಕಾರವು ಮಲಹೊರುವ ಕಾರ್ಮಿಕರ ಪುನರ್ವಸತಿಗೆಂದು ಬಜೆಟ್‌ನಲ್ಲಿ ತೆಗೆದಿಡಲಾಗುತ್ತಿದ್ದ ನಿಧಿಯಲ್ಲಿ 95 ಶೇಕಡಾ ಕಡಿತಗೊಳಿಸಿದೆ. 2014-15ರ ಸಾಲಿನಲ್ಲಿ ಮಲಹೊರುವ ಕಾರ್ಮಿಕರ ಪುನರ್ವಸತಿಗಾಗಿ ಸ್ವ-ಉದ್ಯೋಗ ಯೋಜನೆಗಾಗಿ 448 ಕೋಟಿ ರೂ. ಬಜೆಟ್‌ನಲ್ಲಿ ತೆಗೆದಿಡಲಾಗಿದ್ದರೆ 2017-18ರ ವೇಳೆಗೆ ಈ ಮೊತ್ತವನ್ನು ಕೇವಲ ಐದು ಕೋಟಿ ರೂ.ಗೆ ಇಳಿಸಲಾಗಿದೆ.
ಮಲಹೊರುವ ಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸಲು ಹೋರಾಡುತ್ತಿರುವ ಸಫಾಯಿ ಕರ್ಮಚಾರಿ ಆಂದೋಲನದ ರಾಷ್ಟ್ರೀಯ ಸಂಚಾಲಕರಾದ ಬೆಝ್ವಾಡಾ ವಿಲ್ಸನ್ ಹೇಳುವಂತೆ, “ಮಲಹೊರುವ ಕಾರ್ಮಿಕರ ಸಾವು ಒಂದು ಗಂಭೀರ ವಿಷಯವಾಗಿದೆ. ಪ್ರತಿವರ್ಷ ಮಲಹೊರುವ ಕಾರ್ಮಿಕರಲ್ಲಿ ತಮ್ಮ ಕಸುಬನ್ನು ತೊರೆದು ಹೊಸ ಜೀವನವನ್ನು ಆರಂಭಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಅವರ ಪುನರ್ವಸತಿಗಾಗಿ ಮೀಸಲಿಟ್ಟಿರುವ ಬಜೆಟ್‌ನಲ್ಲಿ ಇಳಿಮುಖವಾಗುತ್ತಿದೆ. ಇದು ಸಮಸ್ಯೆಯ ಬಗ್ಗೆ ಸರಕಾರಕ್ಕಿರುವ ಗಾಂಭೀರ್ಯತೆಯನ್ನು ತೋರಿಸುತ್ತದೆ”.
ಮಲಹೊರುವ ಕಾರ್ಮಿಕರ ಪುನರ್ವಸತಿಗಾಗಿ ಸ್ವ-ಉದ್ಯೋಗ ಯೋಜನೆಯನ್ನು ಅನುಷ್ಟಾನಗೊಳಿಸುವ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆರ್ಥಿಕ ಮತ್ತು ಅಭಿವೃದ್ಧಿ ನಿಗಮದ ಬಳಿ ಬೇಕಾದಷ್ಟು ಹಣವಿರುವುದರಿಂದ 2016-17 ಮತ್ತು 2017-18ರ ಸಾಲಿನಲ್ಲಿ ಬಜೆಟ್‌ನಲ್ಲಿ ಕಡಿಮೆ ಮೊತ್ತವನ್ನು ಮೀಸಲಿಡಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.







