ನಾಡಧ್ವಜ ರಚನೆ ತಜ್ಞರ ಸಮಿತಿ ಅಂತಿಮ ಸಭೆ ಮುಂದೂಡಿಕೆ
ಬೆಂಗಳೂರು, ಜ.22: ನಾಡಧ್ವಜ ರಚನೆ ಕುರಿತಾದ ತಜ್ಞರ ಸಮಿತಿಯ ಕೊನೆಯ ಸಭೆ ಮುಂದೂಡಿಕೆಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಯವರು ಬಜೆಟ್ ಪೂರ್ವ ಸಭೆಯಲ್ಲಿ ಭಾಗಿಯಾಗಬೇಕಿರುವ ಹಿನ್ನೆಲೆಯಲ್ಲಿ ನಾಡಧ್ವಜ ಆಯ್ಕೆ ಸಮಿತಿ ಅಂತಿಮ ಸಭೆ ಮುಂದೂಡಲಾಗಿದೆ.
ಸೋಮವಾರ ನಡೆಯಬೇಕಿದ್ದ ಸಭೆಯನ್ನು ಮುಂದೂಡಿದ್ದೇವೆ. ಮುಂದಿನ ವಾರ ಸಭೆಯ ದಿನಾಂಕ ನಿರ್ಧರಿಸಿ ಪ್ರಕಟಿಸುತ್ತೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ವಿಶುಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ನಾಲ್ಕು ಮಾದರಿಯ ಧ್ವಜದ ಪೈಕಿ ಒಂದು ಧ್ವಜ ಫೈನಲ್ ಮಾಡಬೇಕಿದ್ದು, ಹಳದಿ, ಬಿಳಿ, ಕೆಂಪು ಬಣ್ಣದ ಧ್ವಜದ ಮಧ್ಯದಲ್ಲಿ ರಾಜ್ಯ ಲಾಂಛನ ಗಂಡ ಭೇರುಂಡ ಚಿತ್ರವಿರುವ ಧ್ವಜ ಅಂತಿಮವಾಗಿದೆ. ಅದನ್ನು ಇಂದು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ ಎನ್ನಲಾಗಿತ್ತು. ಆದರೆ, ಸಭೆ ಮುಂದೂಡಿಕೆಯಾದ ಕಾರಣ ನಾಡಧ್ವಜ ಯಾವುದಾಗಲಿದೆ ಎನ್ನುವ ಕುತೂಹಲ ಹಾಗೇ ಉಳಿದುಕೊಳ್ಳುವಂತಾಗಿದೆ ಎಂದರು.
ಧ್ವಜ ಬದಲಾವಣೆಗೆ ವಾಟಾಳ್ ವಿರೋಧ: ಇನ್ನು ನಾಡಧ್ವಜ ಬದಲಾವಣೆಗೆ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಉದಯವಾದಾಗಿನಿಂದಲೂ ಹಳದಿ ಕೆಂಪು ಬಣ್ಣದ ಧ್ವಜವನ್ನು ಬಳಸಿಕೊಂಡು ಬರಲಾಗದೆ. ಅದನ್ನೇ ನಾಡಧ್ವಜ ಎಂದು ಅನೌಪಚಾರಿಕವಾಗಿ ಒಪ್ಪಿಕೊಂಡು ಬರಲಾಗಿದೆ. ಧ್ವಜದೊಂದಿಗೆ ಭಾವನಾತ್ಮಕ ಸಂಬಂಧವಿದೆ. ಹೀಗಾಗಿ, ಅದನ್ನೇ ನಾಡಧ್ವಜ ಎಂದು ಅಧಿಕೃತವಾಗಿ ಒಪ್ಪಿಕೊಳ್ಳಬೇಕು. ಅದನ್ನು ಬಿಟ್ಟು ಬೇರೆ ಧ್ವಜ ಆಯ್ಕೆ ಮಾಡಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.







