ಶಿವಮೊಗ್ಗ: ದುಷ್ಕರ್ಮಿಗಳಿಂದ ಯುವಕನಿಗೆ ಚೂರಿ ಇರಿತ

ಶಿವಮೊಗ್ಗ, ಜ. 22: ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಕಡೆಯ ಗುಂಪೊಂದು ಮಾರಕಾಸ್ತ್ರ, ದೊಣ್ಣೆಗಳಿಂದ ಯುವಕನ ಕುಟುಂಬದವರ ಮೇಲೆ ದಾಳಿ ನಡೆಸಿ ನಾಲ್ವರನ್ನು ಗಾಯಗೊಳಿಸಿದೆ. ಈ ವೇಳೆ ಯುವಕನಿಗೆ ಚೂರಿಯಿಂದ ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ನಗರದ ಹೊರವಲಯ ಗೋವಿಂದಾಪುರ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಗೋವಿಂದಾಪುರದ ನಿವಾಸಿ ನವೀನ್ (23) ಚೂರಿ ಇರಿತಕ್ಕೊಳಗಾದ ಯುವಕ ಎಂದು ಗುರುತಿಸಲಾಗಿದೆ. ಈತನ ಸಹೋದರ ನಿತೀನ್, ಪ್ರಜ್ವಲ್ ಹಾಗೂ ತಂದೆ ರಾಜು ಎಂಬುವರು ಗಾಯಗೊಂಡಿದ್ದಾರೆ. ಗಾಯಾಳುಗಳೆಲ್ಲರೂ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಗೋಪಾಳ ಬಡಾವಣೆಯ ಕೊರಮರಕೇರಿಯ ನಿವಾಸಿಗಳಾದ ಕುಟ್ಟಿ, ಪ್ರವೀಣ್, ನವೀನ್, ಚೇತನ, ಸಂತು, ಯುವತಿಯ ತಾಯಿ ಧನಲಕ್ಷ್ಮಿ ಸೇರಿದಂತೆ ಇತರೆ ಏಳೆಂಟು ಜನರ ವಿರುದ್ದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಘಟನೆಯ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಘಟನೆಯ ಹಿನ್ನೆಲೆ: ದೂರುದಾರ ನವೀನ್‍ಗೆ ಆರೋಪಿ ಧನಲಕ್ಷ್ಮೀ ಎಂಬುವರ ಪುತ್ರಿಯ ಪರಿಚಯವಾಗಿತ್ತು. ತದನಂತರ ಇವರಿಬ್ಬರು ಪ್ರೇಮಿಸಲಾರಂಭಿಸಿದ್ದರು. ಇಬ್ಬರೂ ಬೇರೆ ಬೇರೆ ಜಾತಿಗೆ ಸೇರಿದವರಾಗಿದ್ದರು. ಈ ವಿಷಯ ಧನಲಕ್ಷ್ಮೀಯವರಿಗೆ ಗೊತ್ತಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಮೂರು ತಿಂಗಳ ಹಿಂದೆ ಆರೋಪಿ ಸಂತು ಎಂಬಾತನು ನವೀನ್‍ಗೆ ಜೀವ ಬೆದರಿಕೆ ಕೂಡ ಹಾಕಿದ್ದ. ಈ ಕುರಿತಂತೆ ಪೊಲೀಸರಿಗೆ ದೂರು ನೀಡುವುದಾಗಿ ನವೀನ್ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಆರೋಪಿಗಳು ತಣ್ಣಗಾಗಿದ್ದರು.
ಈ ವೈಮನಸ್ಸಿನ ಕಾರಣದಿಂದ ಭಾನುವಾರ ರಾತ್ರಿ ಗೋವಿಂದಾಪುರದ ವೀರಭದ್ರೇಶ್ವರ ದೇವಾಲಯದ ಬಳಿ ಆರೋಪಿಗಳು ಬೈಕ್‍ನಲ್ಲಿ ಮನೆಗೆ ಆಗಮಿಸುತ್ತಿದ್ದ ನವೀನನನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ನಂತರ ಹಲ್ಲೆ ನಡೆಸಿದ್ದಾರೆ. ಈ ವಿಷಯ ತಿಳಿದ ನವೀನ್ ಮನೆಯವರು ಸ್ಥಳಕ್ಕೆ ಆಗಮಿಸಿದ್ದು, ಅವರ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಆಗಮಿಸುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.







