ಹಿರಿಯ ವಿದ್ವಾಂಸ ಪಾದೆಕಲ್ಲು ನರಸಿಂಹ ಭಟ್ ನಿಧನ

ಉಡುಪಿ, ಜ. 22: ಹಿರಿಯ ವಿದ್ವಾಂಸ, ಕೃಷಿಕ ಪಾದೆಕಲ್ಲು ನರಸಿಂಹ ಭಟ್ (83) ಸೋಮವಾರ ದ.ಕ. ಜಿಲ್ಲೆ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಪಾದೆಕಲ್ಲು ನಿವಾಸದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರ ಗಣಿತ ಶಾಸ್ತ್ರ ಪ್ರಾಧ್ಯಾಪಕ ಸುಬ್ರಹ್ಮಣ್ಯ ಕುಮಾರ್ ಅವರನ್ನು ಅಗಲಿದ್ದಾರೆ.
ಕರೋಪಾಡಿ, ಮಂಗಳೂರಿನಲ್ಲಿ ಪದವಿವರೆಗೆ ಓದಿದ ಭಟ್, ಮದ್ರಾಸ್‌ನ ವಿವೇಕಾನಂದ ಕಾಲೇಜಿನಲ್ಲಿ ಸಂಸ್ಕೃತ ಎಂ.ಎ.ನಲ್ಲಿ ಪ್ರಥಮ ರ್ಯಾಂಕ್ ಗಳಿಸಿದರು. ಅವರು ಪ್ರಸಿದ್ಧ ವಿದ್ವಾಂಸರಾದ ಡಾ.ವಿ.ರಾಘವನ್, ಕಲ್ಯಾಣಸುಂದರ ಶಾಸ್ತ್ರಿ ಮೊದಲಾದವರ ಶಿಷ್ಯರು. ಮದ್ರಾಸಿನಲ್ಲಿ ಕೆಲ ಕಾಲ ಪ್ರಾಧ್ಯಾಪಕರಾಗಿದ್ದ ಭಟ್ ಬಳಿಕ, ಸಾಗರ ಲಾಲ್‌ಬಹದ್ದೂರ್ ಕಾಲೇಜಿನಲ್ಲಿ ಕವಿ ಗೋಪಾಲಕೃಷ್ಣ ಅಡಿಗರು ಪ್ರಾಂಶುಪಾಲರಾಗಿದ್ದಾಗ ಸಂಸ್ಕೃತ ಪ್ರಾಧ್ಯಾಪಕರಾಗಿದ್ದರು. ಅನಂತರ ಊರಿಗೆ ಬಂದು ಕೃಷಿಕರಾಗಿ ನೆಲೆನಿಂತರು.
ಅವರ ಆಸಕ್ತಿಯ ವಿಷಯ ಭಾರತೀಯ ಕಾವ್ಯಮೀಮಾಂಸೆ. ‘ಶಿಕ್ಷಣ ಶೋಧನ’, ‘ಭಾರತೀಯ ಸಂವೇದನೆ- ಸಂವಾದ’, ‘ಅಭಿನವ ಗುಪ್ತ’, ‘ಕಾವ್ಯ ಮೀಮಾಂಸೆ- ಹೊಸಹೊಳಹುಗಳು’ ಇವರು ರಚಿಸಿದ ಕೃತಿಗಳು. ಭಟ್ ಅವರು ತಮ್ಮ ವಿದ್ವತ್ತಿನಿಂದ ನಾಡಿನಲ್ಲಿ ಪ್ರಸಿದ್ಧರಾಗಿದ್ದರು.
ಡಾ.ಅನಂತಮೂರ್ತಿ, ಡಾ.ಚಂದ್ರಶೇಖರ ಕಂಬಾರ ಮುಂತಾದ ಹಿರಿಯ ಸಾಹಿತಿಗಳ ನಿಕಟವರ್ತಿ ಗಳಾಗಿದ್ದರು. ಭಟ್ ಅವರು ಬಂಟ್ವಾಳ ತಾಲೂಕು ಮತ್ತು ದ.ಕ. ಜಿಲ್ಲೆಯ 16ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.







