ರಾಷ್ಟ್ರ ಮಟ್ಟದ ಭಾಷಣ ಸ್ಪರ್ಧೆ: ಉಡುಪಿಯ ಶ್ರೇಯಸ್ ಕೊಟ್ಯಾನ್‌ಗೆ ಪ್ರಥಮ ಸ್ಥಾನ

ಉಡುಪಿ, ಜ. 22: ಭಾರತದ ಗಣರಾಜ್ಯೋತ್ಸವ ದಿನ ಹಾಗೂ ಸಂವಿಧಾನ ದಿನವನ್ನು ಆಚರಿಸುವ ಪ್ರಯುಕ್ತ ‘ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನರು’ ವಿಷಯದ ಕುರಿತು ನಡೆದ ರಾಷ್ಟ್ರಮಟ್ಟದ ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಶ್ರೇಯಸ್ ಕೋಟ್ಯಾನ್ ಪ್ರಥಮ ಸ್ಥಾನವನ್ನು ಗೆದ್ದುಕೊಂಡಿದ್ದಾರೆ.
ನೆಹರು ಯುವ ಕೇಂದ್ರದಿಂದ ಹೊಸದಿಲ್ಲಿಯಲ್ಲಿ ಜ.21-22ರಂದು ನಡೆದ ಈ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಶ್ರೇಯಸ್ ಕೋಟ್ಯಾನ್ ಅವರು ಇಡೀ ದೇಶದಲ್ಲೇ ಅಗ್ರಸ್ಥಾನವನ್ನು ಪಡೆಯುವ ಮೂಲಕ ಎರಡು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ಗೆದ್ದುಕೊಂಡಿದ್ದಾರೆ.
ಇದಕ್ಕೆ ಮೊದಲು ಶ್ರೇಯಸ್ ನೆಹರು ಯುವ ಕೇಂದ್ರದ ವತಿಯಿಂದ ತಾಲೂಕು, ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ನಡೆದ ಸ್ಪರ್ಧೆಗಳಲ್ಲೂ ಪ್ರಥಮಸ್ಥಾನ ಪಡೆದು ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದಿದ್ದರು.
ಶ್ರೇಯಸ್ ಕೋಟ್ಯಾನ್ ಅವರು ತನ್ನ ಸಾಧನೆಗಾಗಿ ಕೇಂದ್ರ ಯುವ ಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಡಾ. ಅಮರೇಂದ್ರ ಕುಮಾರ್ ದುಬೆ ಇವರಿಂದ ಪ್ರಶಸ್ತಿ ಹಾಗೂ ಚೆಕ್‌ಗಳನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ನೆಹರು ಯುವ ಕೇಂದ್ರ ಸಂಘಟನೆಯ ವೈಸ್ ಚೆಯರ್ ಮ್ಯಾನ್ ದಿನೇಶ್ ಪ್ರತಾಪ್ ಸಿಂಗ್, ನೆಹರು ಯುವ ಕೇಂದ್ರ ಸಂಘಟನೆಯ ಡಿಜಿ, ಮೇಜರ್ ಜನರಲ್ ದಿಲಾವರ್ ಸಿಂಗ್, ನೆಹರು ಯುವ ಕೇಂದ್ರ ಸಂಘಟನೆಯ ಎಕ್ಸುಕ್ಯೂಟಿವ್ ಡೈರೆಕ್ಟರ್ ವೀರೇಂದ್ರ ಮಿಶ್ರಾ ಹಾಗೂ ಕೇಂದ್ರ ಯುವ ಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಉ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿಯ ಶ್ರೇಯಸ್ ಕೋಟ್ಯಾನ್ ಅವರ ಈ ಹೆಮ್ಮೆಯ ಸಾಧನೆ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹರ್ಷ ಹಾಗೂ ಪ್ರಶಂಸೆ ವ್ಯಕ್ತಪಡಿಸಿದ್ದು, ಇದೇ ಜ.26ರಂದು ಉಡುಪಿಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶ್ರೇಯಸ್ ಜಿ.ಕೊಟ್ಯಾನ್ ಅವರ ಸಾಧನೆ ಯನ್ನು ಗುರುತಿಸಿ ಸನ್ಮಾನಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶ್ರೇಯಸ್ ಉಡುಪಿ ಎಂಜಿಎಂ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿ ಯಾಗಿದ್ದು, ಇಲ್ಲಿನ ಗುಂಡಿಬೈಲು ನಿವಾಸಿಗಳಾದ ಗಣೇಶ್ ಕೊಟ್ಯಾನ್ ಹಾಗೂ ಸುಜಾತ ಜಿ.ಕೊಟ್ಯಾನ್ ಅವರ ಪುತ್ರ. ಕಾಲೇಜಿನ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ಸು ಪಡೆದಿರುವ ಶ್ರೇಯಸ್, ಎನ್ನೆಸ್ಸೆಸ್‌ನ ಕ್ರಿಯಾಶೀಲ ಸದಸ್ಯರಾಗಿದ್ದಾರೆ.







