ಜ.26 ರಂದು ಮಣ್ಣಪಳ್ಳದಲ್ಲಿ ಸುಗ್ಗಿ-ಹುಗ್ಗಿ ಸಂಭ್ರಮ
ಉಡುಪಿ, ಜ.22: ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೃಷಿ ಇಲಾಖೆ ಹಾಗೂ ಮಣ್ಣಪಳ್ಳ ಅಭಿವೃದ್ಧಿ ಸಮಿತಿ ಇವರ ಸಹಯೋಗದೊಂದಿಗೆ ಜ.26 ರಂದು ಸಂಜೆ 4 ಗಂಟೆಗೆ ಮಣ್ಣಪಳ್ಳ ನಿಸರ್ಗಧಾಮ ಬಯಲು ರಂಗಮಂದಿರ ದಲ್ಲಿ ಸುಗ್ಗಿ-ಹುಗ್ಗಿ ಕಾಯರ್ಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಚೇರ್ಕಾಡಿಯ ಭಗವತಿ ಎಂ ಕೋಶಿಕ ಇವರಿಂದ ಸಿರಿಧಾನ್ಯ ಚರಿತ ನಾಟಕ, ಸುರಕ್ಷಾ ಮತ್ತು ಬಳಗ ಕಾರ್ಕಳ ಇವರಿಂದ ಚೆನ್ನು ಕುಣಿತ, ಮೈಸೂರು ಮಹೇಶ್ ಮತ್ತು ತಂಡದಿಂದ ನಗಾರಿ, ಕೆ.ಆರ್ ನಗರದ ಕುಮಾರ್ ನಾಯ್ಕ ತಂಡದಿಂದ ಪೂಜಾ ಕುಣಿತ, ಹುಣಸೂರಿನ ಗೋವಿಂದ ನಾಯ್ಕ ಇವರಿಂದ ಡೊಳ್ಳು ಕುಣಿತ, ಉತ್ತರ ಕನ್ನಡದ ಅರುಣ್ ತಂಡದಿಂದ ಸಿದ್ಧಿ ಸಿಗ್ಮೂ ಕುಣಿತ, ಪಾಂಬೂರು ಕಾಡು ಮಲ್ಲಿಗೆ ಮಹಿಳಾ ಕಲಾತಂಡದಿಂದ ಕೊರಗರ ನೃತ್ಯ, ಮುಟ್ಲುಪಾಡಿಯ ಪ್ರಮೋದಿನಿ ನಾಯ್ಕಿ ಮತ್ತು ಬಳಗದಿಂದ ಕೋಲಾಟ, ಚಂಡ್ಕಳ ಶಂಕರ್‌ದಾಸ್ ಬಳಗದಿಂದ ಕಂಗೀಲು, ಸಂಗಮ ನೃತ್ಯ ತಂಡದ ರಮೇಶ್ ಕಲ್ಮಾಡಿಯಿಂದ ಕಂಸಾಳೆ ನೃತ್ಯ ನಡೆಯಲಿದೆ.
ಅಲ್ಲದೇ ಮಲ್ಲಿಕಾರ್ಜುನ ಕುಡುಬಿ ಜಾನಪದ ಕಲಾ ಸಂಘ ಮಂದಾರ್ತಿ ಇವರಿಂದ ಕುಡುಬಿ ನೃತ್ಯ, ಹೊಸ್ಮಾರು ಜಾನಪದ ವಾಹಿನಿಯ ಪ್ರವೀಣ್ ತಂಡದಿಂದ ಜಾನಪದ ವೈವಿಧ್ಯ, ಮಲ್ಪೆ ಸರಸ್ವತಿ ಜಾನಪದ ಕಲಾತಂಡದಿಂದ ಕರಗ ಕುಣಿತ, ಉದ್ಯಾವರ ಶ್ರೀರಾಮ ಜಾನಪದ ಕಲಾತಂದ ಪುನೀತ್ ಇವರಿಂದ ವೀರಗಾಸೆ, ಪುತ್ತೂರು ಶ್ರೀಕೃಷ್ಣಪ್ಪ ಬಂಬಿಲ ಮತ್ತು ತಂಡದಿಂದ ಸುಗ್ಗಿ ಕುಣಿತ, ಮಂಗಳೂರಿನ ರವಿರಾಜ್ ತಂಡದಿಂದ ಕೃಷಿ ಹಾಡು ಮತ್ತು ಪಾಡ್ದನ, ಉಪ್ಪಿನಂಗಡಿ ನವೀನ್ ಕಾಂಚಾಣರಿಂದ ಶಾರ್ದೂಲ ನೃತ್ಯ, ವಿದ್ಯಾರಂಗ ಮಿತ್ರ ಮಂಡಳಿ ಇವರಿಂದ ಬೆಸ್ತರ ನೃತ್ಯ ಮುಂತಾದ ಕಲಾಪ್ರದರ್ಶನ ಗಳಿವೆ.
ಉಡುಪಿ ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯ ತಿನಿಸುಗಳು, ಸಿರಿ ಧಾನ್ಯಗಳ ಪ್ರದರ್ಶನ, ಮಾರಾಟದ ಮಳಿಗೆಗಳನ್ನು ಇಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.







