ಮಾ. 24ರಿಂದ ತುಳು ನಾಟಕ ಪರ್ಬ
ಮಂಗಳೂರು, ಜ.22: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ಮಾ. 24ರಿಂದ 31ರವರೆಗೆ ತುಳು ನಾಟಕ ಪರ್ಬವು ನಗರದ ಪುರಭವನದಲ್ಲಿ ನಡೆಸಲು ಅಕಾಡಮಯ ಸಿರಿಚಾವಡಿಯಲ್ಲಿ ಅಧ್ಯಕ್ಷ ಎ.ಸಿ.ಭಂಡಾರಿಯ ಅಧ್ಯಕ್ಷತೆಯಲ್ಲಿ ಜರಗಿದ ಜಿಲ್ಲೆಯ ಪ್ರಮುಖ ರಂಗಾಸಕ್ತರ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ತುಳುಭಾಷೆಯ ಬೆಳವಣಿಗೆಗಾಗಿ ತುಳು ರಂಗಭೂಮಿಯ ಮಹಾನ್ ಕೊಡುಗೆಯನ್ನು ಪರಿಗಣಿಸಿ ಅಗಲಿರುವ ಹಿರಿಯ ನಾಟಕಕಾರರ ಕೃತಿಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.
8 ದಿನಗಳಲ್ಲಿ 8 ಮಂದಿ ಹಿರಿಯ ರಂಗಕರ್ಮಿಗಳ ಕೃತಿಗಳನ್ನು ಪ್ರದರ್ಶಿಸಲು ಜಿಲ್ಲೆಯ 8 ಕಲಾತಂಡಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ತುಳು ರಂಗಭೂಮಿಗೆ ಶತಮಾನದ ಇತಿಹಾಸವಿದ್ದು ಇಂದಿನ ಆಧುನಿಕ ನಾಟಕಗಳ ನಡುವೆ ಹಿಂದಿನ ಕಾಲದ ನಾಟಕಗಳ ಶೈಲಿಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅಧ್ಯಕ್ಷ ಎ. ಸಿ. ಭಂಡಾರಿ ಹೇಳಿದರು. ಸಭೆಯಲ್ಲಿ ಜಿಲ್ಲೆಯ ರಂಗಕರ್ಮಿಗಳಾದ ರಿಚರ್ಡ್ ಕ್ಯಾಸ್ಟಲಿನೊ, ರೋಹಿದಾಸ ಕದ್ರಿ, ಕಿಶೋರ್ ಡಿ.ಶೆಟ್ಟಿ, ತಮ್ಮ ಲಕ್ಷ್ಮಣ, ಪ್ರಭಾಕರ ಕಲ್ಯಾಣಿ, ಕದ್ರಿ ನವನೀತ್ ಶೆಟ್ಟಿ, ದಿನೇಶ್ ಅತ್ತಾವರ, ಜಯಂತಿ ಎಸ್. ಬಂಗೇರ, ಪ್ರದೀಪ್ ಆಳ್ವ, ಭಾಸ್ಕರ ರೈ, ರಮೇಶ್ ರೈ ಕುಕ್ಕುವಳ್ಳಿ, ರಾಮಚಂದ್ರ ಬೈಕಂಪಾಡಿ, ಜಗನ್ ಪವಾರ್ ಬೇಕಲ್, ಗಂಗಾಧರ ಕಿರೋಡಿಯನ್ ಸಲಹೆ ನೀಡಿದರು.
ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ, ಮೂಡುಬಿದಿರೆ ತುಳುಕೂಟದ ಅಧ್ಯಕ್ಷ ಚಂದ್ರಹಾಸ ದೇವಾಡಿಗ, ಬಂಟ್ವಾಳ ತುಳುಕೂಟದ ಕಾರ್ಯದರ್ಶಿ ಡಿ.ಎಂ. ಕುಲಾಲ್, ಅಕಾಡಮಿ ಸದಸ್ಯರಾದ ಪ್ರಭಾಕರ್ ನೀರ್‌ಮಾರ್ಗ, ಬೆನೆಟ್ ಅಮ್ಮಣ್ಣ, ಡಾ. ವಾಸುದೇವ ಬೆಳ್ಳೆ, ಮಾಜಿ ಸದಸ್ಯರಾದ ಮೋಹನ್ ಕೊಪ್ಪಲ ಕದ್ರಿ, ಯಾದವ ವಿ. ಕರ್ಕೇರ ಭಾಗವಹಿಸಿದ್ದರು. ಅಕಾಡಮಿಯ ತುಳು ನಾಟಕ ಪರ್ಬ ಸಮಿತಿಯ ಸದಸ್ಯ ಸಂಚಾಲಕ ಶಿವಾನಂದ ಕರ್ಕೇರ ಸ್ವಾಗತಿಸಿದರು. ರಿಜಿಸ್ಟ್ರಾರ್ ಚಂದ್ರಹಾಸ ರೈ ವಂದಿಸಿದರು.







