ಆಪ್ ಶಾಸಕರನ್ನು ಅನರ್ಹಗೊಳಿಸಲು ಆತುರವೇಕೆ?: ಶಿವಸೇನೆ ಪ್ರಶ್ನೆ

ಮುಂಬೈ, ಜ.22: ಲಾಭದಾಯಕ ಹುದ್ದೆಯನ್ನು ಹೊಂದಿದ್ದಾರೆ ಎಂಬ ಆರೋಪದಲ್ಲಿ ದಿಲ್ಲಿಯ ಆಮ್ ಆದ್ಮಿ ಪಕ್ಷದ ಇಪ್ಪತ್ತು ಶಾಸಕರನ್ನು ಅನರ್ಹಗೊಳಿಸಲು ಇಷ್ಟೊಂದು ಆತುರ ಪ್ರದರ್ಶಿಸುತ್ತಿರುವುದಾದರೂ ಯಾಕೆ ಎಂದು ಶಿವಸೇನೆ ಸೋಮವಾರ ಪ್ರಶ್ನಿಸಿದೆ.
ಅನೇಕ ಶಾಸಕರನ್ನು ಒಟ್ಟಿಗೆ ಅನರ್ಹಗೊಳಿಸಲಾಗಿರುವ ಇದೊಂದು ಅನಿರೀಕ್ಷಿತ ಘಟನೆಯಾಗಿದೆ. ಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ಸಾರ್ವಜನಿಕ ಅಭಿಯಾನ ನಡೆಸಿದ ಕಾರಣಕ್ಕಾಗಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಶಿವಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡಾ ಆತುರದಲ್ಲಿ ಭಾರತೀಯ ಚುನಾವಣಾ ಆಯೋಗದ ಸಲಹೆಗೆ ತಮ್ಮ ಅಂಕಿತವನ್ನು ಒತ್ತಿದ್ದಾರೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾ ಮತ್ತು ದೊಪಹರ್ ಕ ಸಾಮ್ನಾದ ಸಂಪಾದಕೀಯದಲ್ಲಿ ತಿಳಿಸಿದೆ.
ದಿಲ್ಲಿಯಲ್ಲಿ ಶೀಲಾ ದೀಕ್ಷಿತ್ ಅವರ ಸರಕಾರ ಇದ್ದಾಗಲೂ ಶಾಸಕರ ಮೇಲೆ ಇದೇ ರೀತಿಯ ಆರೋಪಗಳಿದ್ದವು ಮತ್ತು ಈಗಲೂ ಹಲವು ರಾಜ್ಯಗಳಲ್ಲಿ ಈ ಪದ್ಧತಿಯಿದೆ. ಆದರೆ ಅವರೆಲ್ಲರೂ ತಮ್ಮ ಹುದ್ದೆಯಲ್ಲಿ ಮುಂದುವರಿಯುತ್ತಿದ್ದಾರೆ. ಆಪ್ ಶಾಸಕರ ವಿಷಯದಲ್ಲಿ ಚುನಾವಣಾ ಆಯೋಗ ಆತುರದ ನಿರ್ಧಾರವನ್ನು ತೆಗೆದುಕೊಂಡಿದೆ.ಆಯೋಗದ ಮಾಜಿ ಅಧಿಕಾರಿಗಳ ಅಭಿಪ್ರಾಯವೂ ಇದೇ ಆಗಿದೆ. ಆಪ್ ಶಾಸಕರಿಗೆ ತಮ್ಮ ಮಾತನ್ನು ಹೇಳಲೂ ಅವಕಾಶವನ್ನು ನೀಡಿಲ್ಲ ಎಂದು ಸೇನೆ ಕಿಡಿಕಾರಿದೆ. ಕೇಜ್ರಿವಾಲ್ ಸರಕಾರದ ಬದಲಾಗಿ ದಿಲ್ಲಿಯಲ್ಲಿ ಬಿಜೆಪಿ ಸರಕಾರವಿದ್ದಿದ್ದರೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಇದೇ ರೀತಿ 20 ಶಾಸಕರನ್ನು ಮನೆಗೆ ಕಳುಹಿಸಲು ಚುನಾವಣಾ ಆಯೋಗಕ್ಕೆ ಸೂಚನೆ ನೀಡುತ್ತಿದ್ದರೇ?, ಬಿಜೆಪಿ ಶಾಸಕರಿಗೆ ಮಾತನಾಡಲು ಅವರು ಅವಕಾಶ ನೀಡುತ್ತಿರಲಿಲ್ಲವೇ?, ಕೇಂದ್ರಕ್ಕಿಂತಲೂ ಹೆಚ್ಚಾಗಿ ಲೆಫ್ಟಿನೆಂಟ್ ಗವರ್ನರ್ ಬಿಜೆಪಿಯ ಏಜೆಂಟ್‌ನಂತೆ ವರ್ತಿಸುತ್ತಿದ್ದಾರೆ ಎಂದು ಸೇನೆ ಆರೋಪಿಸಿದೆ.
ಸಂವಿಧಾನದ ವಿಧಿ 102(1)ರ ಪ್ರಕಾರ ಜನರಿಂದ ಚುನಾಯಿತ ಪ್ರತಿನಿಧಿಗಳಾದ ಶಾಸಕರು ಮತ್ತು ಸಂಸದರಿಗೆ ಭತ್ಯೆಗಳು ಸಿಗುವ ಕಾರಣ ಅವರು ಸರಕಾರ ಪಾವತಿಸುವ ಇತರ ಯಾವುದೇ ಹುದ್ದೆಯನ್ನು ಸ್ವೀಕರಿಸುವುದು ಕಾನೂನು ಬಾಹಿರವಾಗಿದೆ. 20 ಆಪ್ ಶಾಸಕರ ವಿಷಯಕ್ಕೆ ಬಂದರೆ, ಇವರೆಲ್ಲರೂ ತಮಗೆ ನೀಡಲಾಗಿದ್ದ ಹುದ್ದೆಯ ಜೊತೆಗೆ ಲಾಭದಾಯಕ ಹುದ್ದೆ ಎಂದು ಪರಿಗಣಿಸಲಾಗಿರುವ ಸಂಸದೀಯ ಕಾರ್ಯದರ್ಶಿಯ ಪದವಿಯನ್ನೂ ಸ್ವೀಕರಿಸಿದ್ದರು. ಇದರಿಂದಾಗಿ ಅವರು ಜನರಿಂದ ಚುನಾಯಿತ ಪ್ರತಿನಿಧಿಗಳಾಗಿ ತಮಗೆ ನೀಡಲಾದ ಹುದ್ದೆಗೆ ಮೋಸ ಮಾಡಿದ್ದಾಗಿದೆ ಎಂದು ಸೇನೆ ತನ್ನ ಪತ್ರಿಕೆಯಲ್ಲಿ ತಿಳಿಸಿದೆ.







