'ಕಲಬುರಗಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆಗೆ ಅವಕಾಶ ಕಲ್ಪಿಸಿ'
ಬೆಂಗಳೂರು, ಜ.22: ಕಲಬುರಗಿ ಹೈಕೋರ್ಟ್ ಸ್ಥಾಪನೆಯಾಗಿ ಎಂಟು ವರ್ಷಗಳು ಕಳೆದರೂ ಇಲ್ಲಿಯವರೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಕೆಗೆ ಅವಕಾಶ ಕಲ್ಪಿಸಿಲ್ಲ. ಹೀಗಾಗಿ, ಈಗಲಾದರೂ ಅವಕಾಶ ಕಲ್ಪಿಸಿಕೊಡಿ ಎಂಬ ರಿಟ್ ಅರ್ಜಿಯೊಂದು ಕಲಬುರಗಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಲು ಹೈದರಾಬಾದ್ ಕರ್ನಾಟಕದಿಂದ ಬೆಂಗಳೂರು ಹೈಕೋರ್ಟ್‌ಗೆ ಬರಲು 600 ರಿಂದ 800 ಕೀ.ಮೀ ದೂರವಾಗುತ್ತದೆ. ಹೀಗಾಗಿ, ಕಲಬುರಗಿ ಹೈಕೋರ್ಟ್ ಪೀಠಕ್ಕೆ ಪಿಐಎಲ್ ನಡೆಸಲು ಅನುಮತಿ ನೀಡಬೇಕೆಂದು ಕಲಬುರಗಿ ಹೈಕೋರ್ಟ್ ಹಿರಿಯ ವಕೀಲ ರೊಡ್ಡಾ ವೀರಶೆಟ್ಟಿ ಅವರು ಕಲಬುರಗಿ ಪೀಠದಲ್ಲಿ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಲಬುರಗಿ ಹೈಕೋರ್ಟ್ ಪೀಠಕ್ಕೆ ಪಿಐಎಲ್ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಿ ಎಂದು ರಾಜ್ಯ ಸರಕಾರ, ಬೆಂಗಳೂರು ಹೈಕೋರ್ಟ್ ರಿಜಿಸ್ಟ್ರಾರ್, ಮುಖ್ಯ ನ್ಯಾಯಮೂರ್ತಿಗೆ ಮನವಿಯನ್ನು ಸಲ್ಲಿಸಿದ್ದರೂ ಇಲ್ಲಿಯವರೆಗೆ ಯಾವುದೆ ಅನುಮತಿಯನ್ನು ನೀಡಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಹೈಕ ಭಾಗದ ಜನರ ಅನುಕೂಲಕ್ಕಾಗಿಯೆ ಕಲಬುರಗಿಯಲ್ಲಿ ಹೈಕೋರ್ಟ್ ಸ್ಥಾಪನೆಯಾಗಿದೆ. ಆ ಭಾಗದ ಜನರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ, ಪಿಐಎಲ್ ಸಲ್ಲಿಸಲು ಅನುಮತಿ ನೀಡಿದರೆ ಸಾವಿರಾರು ರೂ.ಖರ್ಚು ಮಾಡಿ ಬೆಂಗಳೂರಿಗೆ ಪಿಐಎಲ್ ಸಲ್ಲಿಸಲು ಹೋಗಿ ಬರುವುದು ತಪ್ಪುತ್ತದೆ ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪಿಐಎಲ್ ಎಂದರೇನು : ಭಾರತ ಇಡೀ ವಿಶ್ವದಲ್ಲೇ ಅತ್ಯದ್ಭುತ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ದೇಶ. ಭಾರತದ ಸಂವಿಧಾನ ನಮಗೆ ಕೊಡಮಾಡಿರುವ ಮೂಲಭೂತ ಹಕ್ಕುಗಳು ನಮ್ಮ ಸ್ವತಂತ್ರವಾದ ನೆಮ್ಮದಿಯ ಜೀವನಕ್ಕೆ ಕಾರಣ. ಈ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಂವಿಧಾನದಲ್ಲಿಯೇ ಪರಿಹಾರೋಪಾಯ ಮಾರ್ಗಗಳು ಇವೆ ಎಂಬುದು ನಿಜ. ಆದರೆ ಅದರ ಪ್ರಯೋಜನ ಪಡೆಯಲು ಅಶಿಕ್ಷಿತ ಬಡ ಜನ ಸಮುದಾಯ ಅಸಮರ್ಥವಾಗಿತ್ತು. ಏಕೆಂದರೆ, 1980 ಕ್ಕೆ ಮುಂಚೆ ತೊಂದರೆಗೊಳಗಾದ ವ್ಯಕ್ತಿಗಳ ಪರವಾಗಿ ಬೇರೆಯವರು ದಾವೆ ಹೂಡಲು ಅವಕಾಶವಿರಲಿಲ್ಲ. ಹೀಗಾಗಿ, ಸರಕಾರ ಅಥವಾ ಸರಕಾರದ ಅಂಗ ಸಂಸ್ಥೆಗಳು ಕೈಗೊಂಡಿರುವ ಕ್ರಮ ಅಥವಾ ಕೈಗೊಳ್ಳಲಿರುವ ಕ್ರಮ ಯಾರೇ ವ್ಯಕ್ತಿಗೆ ನೇರವಾಗಿ ತೊಂದರೆಯುಂಟು ಮಾಡಿದ್ದರೆ ಅಥವಾ ತೊಂದರೆ ಉಂಟು ಮಾಡುವಂಥದ್ದಾಗಿದ್ದರೆ ಆ ತೊಂದರೆಗೊಳಗಾಗುವ ವ್ಯಕ್ತಿ ಅಥವಾ ತೊಂದರೆಗೆ ಒಳಗಾಗಬಹುದಾದ ವ್ಯಕ್ತಿ ಮಾತ್ರ ದಾವೆ ಹೂಡಿ ತನ್ನ ಹಿತವನ್ನು ರಕ್ಷಿಸಿಕೊಳ್ಳುವುದು ಸಾಧ್ಯವಿತ್ತು. ಆದರೆ ಹಾಗೆ ತೊಂದರೆಗೊಳಗಾದವನು ಬಡವ, ಶೋಷಿತ ಅಥವಾ ಅಶಿಕ್ಷಿತನಾಗಿದ್ದರೆ, ಅವನು ಸ್ವತಃ ತಾನೇ ತನ್ನ ಹಿತವನ್ನು ರಕ್ಷಿಸಿಕೊಳ್ಳಲು ಅಸಮರ್ಥನಾಗಿರುತ್ತಿದ್ದ, ಇತರರಿಗೆ ಅವನ ಹಿತರಕ್ಷಣೆ ಮಾಡಲು ಅವಕಾಶವಿರಲಿಲ್ಲ.
ಆದರೆ ಈ ಪರಿಸ್ಥಿತಿ ತುರ್ತು ಪರಿಸ್ಥಿತಿಯ ನಂತರ ನಿಧಾನವಾಗಿ ಬದಲಾಯಿತು. ಆ ಅವಧಿಯಲ್ಲಿ, ಸರಕಾರದ ದಮನ ನೀತಿ, ಕಾನೂನು ಉಲ್ಲಂಘನೆ ಮತ್ತು ಬಂಧಿತರನ್ನು ಹಿಂಸೆಗೆ ಗುರಿಪಡಿಸುತ್ತಿದ್ದುದು ಮುಂತಾದ ಅಂಶಗಳು ಶೋಷಿತರ ಪರವಾಗಿ ಇತರರು ವ್ಯಾಜ್ಯ ಹೂಡಲು ಅವಕಾಶವಿರಬೇಕೆಂಬುದರ ಅಗತ್ಯವನ್ನು ಎತ್ತಿ ತೋರಿಸಿದವು. ಈ ಕಳಕಳಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪರಿಕಲ್ಪನೆಗೆ ಕಾರಣವಾಯಿತು. ಈಗ, ನೊಂದವನೇ ನ್ಯಾಯಾಲಯಕ್ಕೆ ಮೊರೆ ಹೋಗಬೇಕು ಎಂಬ ಸಾಂಪ್ರದಾಯಿಕವಾದ ಕಾನೂನಿನ ನಿಯಮವನ್ನು ಸಡಿಲಿಸಲಾಗಿದೆ. ಸಾರ್ವಜನಿಕ ಹಿತಾಸಕ್ತಿಯಳ್ಳ ಯಾರೇ ವ್ಯಕ್ತಿ ಅಥವಾ ಯಾವುದೇ ಸಂಘಟನೆ ನೊಂದ ವರ್ಗದ ಪರವಾಗಿ ನ್ಯಾಯಾಲಯಕ್ಕೆ ಮೊರೆ ಹೋಗಬಹುದು.
ಪಟ್ಟಭದ್ರ ಹಿತಾಸಕ್ತಿಗಳಿಂದ ರಾಷ್ಟ್ರದ ಸಂಪನ್ಮೂಲ ಲೂಟಿಯಾಗಿ ಸಾರ್ವಜನಿಕ ಹಿತರಕ್ಷಣೆಗೆ ಧಕ್ಕೆಯಾದಾಗ ಅಥವಾ ವ್ಯಕ್ತಿಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಯಾರೇ ವ್ಯಕ್ತಿ ಕೇವಲ ಒಂದು ಪತ್ರ ಬರೆಯುವ ಮೂಲಕ ಅಥವಾ ಒಂದು ತಂತಿ ಸಂದೇಶ ಕಳುಹಿಸುವ ಮೂಲಕ ಅತಿ ಕಡಿಮೆ ವೆಚ್ಚದಲ್ಲಿ ನ್ಯಾಯಾಲಯದ ಗಮನ ಸೆಳೆಯಬಹುದು ಎನ್ನುವುದೇ ಈ ಅರ್ಜಿಯ ವೈಶಿಷ್ಟ್ಯ. ಭಾರತದ ಸಂವಿಧಾನ ವ್ಯವಸ್ಥೆಯಲ್ಲಿ ಜನ ಸಾಮಾನ್ಯನ ಕೈಗೆಟುಕಿರುವ ಒಂದು ಅಪೂರ್ವ ಕಾನೂನು ಸೌಲಭ್ಯ ಇದು. ಸಾರ್ವಜನಿಕ ಕ್ಷೇತ್ರದಲ್ಲಿ ಇದು ಬರೀ ಸಂಚಲನವನ್ನಷ್ಟೇ ಅಲ್ಲದೆ ಸುಂಟರ ಗಾಳಿಯನ್ನೂ ಸೃಷ್ಟಿಸಿದೆ.
ಇದರ ಮೂಲ ಉದ್ದೇಶ ಸಾರ್ವಜನಿಕ ಹಿತವನ್ನು ಕಾಪಾಡುವುದು ಅಥವಾ ಸಾರ್ವಜನಿಕ ಹಿತಕ್ಕೆ ಉಂಟಾಗುವ ಹಾನಿಯನ್ನು ತಡೆಗಟ್ಟುವುದು. ಈ ಪ್ರಯತ್ನದಲ್ಲಿ, ನಾಗರಿಕರ ದೂರು ತುಂಬ ಪ್ರಮುಖವಾಗಿದ್ದರೆ, ಅರ್ಜಿಯ ಇತ್ಯರ್ಥಮಾಡುವಾಗ ನ್ಯಾಯಾಲಯಗಳು ಅದಕ್ಕೆ ಸಂಬಂಧಪಟ್ಟ ಮತ್ತು ಅದಕ್ಕೆ ಜವಾಬ್ದಾರರಾಗಿರುವ ಸರಕಾರಿ ಅಧಿಕಾರಿಗಳ ಗಮನಕ್ಕೆ ತರುವ ಸಂಸ್ಥೆಯಾಗಿ, ಮಧ್ಯಂತರ ಪರಿಹಾರ ನೀಡುವ ವೇದಿಕೆಯಾಗಿ, ಒಪ್ಪಂದಕ್ಕೆ ಬರುವಂತೆ ಮಾಡುವ ಮಧ್ಯಸ್ಥಿಕೆದಾರನಾಗಿ ವಿವಿಧ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸುತ್ತಿದೆ. ಇಂತಹ ಒಂದು ಅರ್ಜಿಯಿಂದ ಅನೇಕ ಉದ್ಯೋಗಸ್ಥ ಮಹಿಳೆಯರ ಜೀವನವನ್ನು ಸಹನೀಯವನ್ನಾಗಿ ಮಾಡಲು ಸಾಧ್ಯವಾಯಿತು ಎಂದರೆ ಈ ಕಾನೂನು ಸೌಲಭ್ಯದ ಮಹತ್ವ ಅರಿವಾಗುತ್ತದೆ.
‘ಕಲಬುರಗಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಕೆಗೆ ಅವಕಾಶ ನೀಡಿದರೆ ಹೈದ್ರಾಬಾದ್ ಕರ್ನಾಟಕ ಭಾಗದ ಜನರಿಗೆ ಬಹುದೊಡ್ಡ ಅನುಕೂಲವಾಗುತ್ತದೆ. ಈ ಭಾಗದ ಜನರು ಸಾವಿರಾರು ರೂ.ಖರ್ಚು ಮಾಡಿ ಪಿಐಎಲ್ ಸಲ್ಲಿಸಲು ಬೆಂಗಳೂರು ಹೈಕೋರ್ಟ್‌ಗೆ ಹೋಗಿಬರುವುದು ತಪ್ಪುತ್ತದೆ. ಈ ದೃಷ್ಟಿಯಿಂದ ರಾಜ್ಯ ಸರಕಾರ, ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಅವಕಾಶ ಕಲ್ಪಿಸಿಕೊಡಬೇಕು.’
-ರೊಡ್ಡಾ ವೀರಶೆಟ್ಟಿ , ಹೈಕೋರ್ಟ್ ಹಿರಿಯ ವಕೀಲರು







