25 ಉದ್ಯಮಿಗಳಿಗೆ ಭೂಗತ ಪಾತಕಿ ಸುರೇಶ್ ಪೂಜಾರಿಯಿಂದ ಬೆದರಿಕೆ

ಮುಂಬೈ, ಜ.22: ಭೂಗತ ಪಾತಕಿ ಸುರೇಶ್ ಪೂಜಾರಿ ಮುಂಬೈ ಹಾಗೂ ಥಾಣೆ ಜಿಲ್ಲೆಯ 25 ಉದ್ಯಮಿಗಳಿಗೆ ಬೆದರಿಕೆ ಕರೆಗಳನ್ನು ಮಾಡಿದ್ದ ಎಂಬ ಅಂಶವು ಆತನ ತಂಡದ ಐದು ಮಂದಿ ಸದಸ್ಯರ ವಿಚಾರಣೆಯ ವೇಳೆ ಬಯಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜನವರಿ 10ರಂದು ಭಿವಂಡಿಯಲ್ಲಿ ಹೊಟೇಲ್ ಉದ್ಯಮಿಯ ಮೇಲೆ ಗುಂಡು ಹಾರಿಸಿದ ನಂತರ ಕೇಳಿದ ಹಣವನ್ನು ನೀಡದಿದ್ದರೆ ಇದೇ ರೀತಿ ಗುಂಡು ಹಾರಿಸಲಾಗುವುದು ಎಂದು ಪೂಜಾರಿ ಹಲವು ಉದ್ಯಮಿಗಳಿಗೆ ಬೆದರಿಕೆ ಹಾಕಿದ್ದ. ಆದರೆ ಆತ ಅಂತರ್ಜಾಲದ ಮೂಲಕ ಕರೆ ಮಾಡುತ್ತಿದ್ದ ಕಾರಣ ಆತ ಇರುವ ಸ್ಥಳವನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರದಂದು ಮುಂಬೈ ಕ್ರೈ ಬ್ರಾಂಚ್‌ನ ಸುಲಿಗೆ ತಡೆ ವಿಭಾಗವು ಹರೀಶ್ ಕೋಟ್ಯಾನ್, ಸಂಕೇತ್ ದಲ್ವಿ , ಪ್ರಥಮೇಶ್ ಕದಮ್, ನೂರ್‌ಮುಹಮ್ಮದ್ ಖಾನ್ ಮತ್ತು ಅನಿಕೇತ್ ಠಾಕೂರ್ ಎಂಬ ಐವರು ರೌಡಿಗಳನ್ನು ಬಂಧಿಸಿತ್ತು. ಭಿವಂಡಿಯಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು.
ಕೋಟ್ಯಾನ್ ತನ್ನ ಸ್ನೇಹಿತನ ಮೂಲಕ ಮುಂಬೈ, ಥಾಣೆ ಮತ್ತು ಉಲ್ಲಾಸ್‌ನಗರದಲ್ಲಿರುವ ಉದ್ಯಮಿಗಳ ವಿವರಗಳನ್ನು ಪಡೆದುಕೊಳ್ಳುತ್ತಿದ್ದ. ದಕ್ಷಿಣ ಮುಂಬೈಯ ಉದ್ಯಮಿಯೊಬ್ಬನೊಂದಿಗೆ ಕೋಟ್ಯಾನ್ ಸ್ನೇಹಿತನಿಗೆ ಹಳೆದ್ವೇಷವಿದ್ದು, ಈ ಕಾರಣದಿಂದ ಆತನ ವಿಳಾಸವನ್ನೂ ಆತನಿಗೆ ನೀಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಸಂಕೇತ್ ದಾಲ್ವಿ ಚೂಪಾದ ಗಾಜಿನ ತುಂಡನ್ನು ಬಳಸಿ ಆತ್ಮಹತ್ಯೆ ಮಾಡಲು ಯತ್ನಿಸಿದ್ದ. ಸದ್ಯ ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕ್ರಿಮಿನಲ್‌ಗಳು ಈ ರೀತಿಯ ತಂತ್ರಗಳನ್ನು ಬಳಸುವುದು ಸಾಮಾನ್ಯ ಎಂದು ಡಿಸಿಪಿ ದಿಲೀಪ್ ಸಾವಂತ್ ತಿಳಿಸಿದ್ದಾರೆ.
ಬಂಧಿತ ಆರೋಪಿಗಳ ವಿರುದ್ಧ ಮೋಕಾ ಕಾಯ್ದೆಯನ್ನು ಹಾಕಲಾಗುವುದು. ಸಂತ್ರಸ್ತರು ಮುಂದೆ ಬಂದು ದೂರು ನೀಡಿದಲ್ಲಿ ಪೊಲೀಸರಿಗೂ ಈ ಸಮಾಜಘಾತುಕರ ವಿರುದ್ಧ ಕ್ರಮ ಕೈಗೊಳ್ಳಲು ಸುಲಭವಾಗುತ್ತದೆ ಎಂದು ಸಾವಂತ್ ತಿಳಿಸಿದ್ದಾರೆ.