ಸಮಗ್ರ ಅಭಿವೃದ್ಧಿ ಸೂಚ್ಯಂಕ ಪಟ್ಟಿ: ಭಾರತವನ್ನು ಹಿಂದಿಕ್ಕಿದ ಚೀನಾ, ಪಾಕ್!
ದೇಶ ಎಷ್ಟನೆ ಸ್ಥಾನದಲ್ಲಿದೆ ಗೊತ್ತಾ?

ಹೊಸದಿಲ್ಲಿ,ಜ.22: ವಿಶ್ವ ಆರ್ಥಿಕ ವೇದಿಕೆ (ಡಬ್ಲುಇಎಫ್) ಸೋಮವಾರ ಬಿಡುಗಡೆಗೊಳಿಸಿರುವ ಸಮಗ್ರ ಅಭಿವೃದ್ಧಿ ಸೂಚ್ಯಂಕ ಪಟ್ಟಿಯಲ್ಲಿ ಭಾರತವು 62ನೇ ಸ್ಥಾನದಲ್ಲಿದ್ದು, ಚೀನಾ, ಪಾಕ್‌ಗಿಂತಲೂ ಕೆಳಗಿನ ರ್ಯಾಂಕ್‌ಗೆ ಕುಸಿದಿದೆ.
ಡಬ್ಲ್ಯುಇಎಫ್‌ನ ಉದಯೋನ್ಮುಖ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿ ಸಮಗ್ರ ಅಭಿವೃದ್ಧಿಯ ರ್ಯಾಂಕಿಂಗ್‌ನಲ್ಲಿ ಭಾರತವು 62ನೇ ಸ್ಥಾನದಲ್ಲಿದ್ದರೆ, ಚೀನಾ 26 ಹಾಗೂ ಪಾಕ್ 47ನೇ ಸ್ಥಾನವನ್ನು ಪಡೆದು ಕೊಂಡು ಭಾರತಕ್ಕಿಂತ ಮುಂದಿವೆ. ದಾವೋಸ್‌ನಲ್ಲಿ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶ ಆರಂಭ ಗೊಂಡಿರುವಂತೆ, ಡಬ್ಲ್ಯುಇಎಫ್‌ನ ಸಮಗ್ರ ಅಭಿವೃದ್ಧಿ ಸೂಚ್ಯಂಕದಲ್ಲಿ ಈ ವರ್ಷವೂ ಭಾರತ ಕಳಪೆ ಸ್ಥಾನದಲ್ಲಿರುವುದು ಮೋದಿ ಸರಕಾರಕ್ಕೆ ಮುಜುಗರ ತರುವ ನಿರೀಕ್ಷೆಯಿದೆ.
ಅತ್ಯಂತ ಸುಧಾರಿತ ಆರ್ಥಿಕತೆಯ ದೇಶಗಳ ಪೈಕಿ ಯುರೋಪ್ ರಾಷ್ಟ್ರವಾದ ನಾರ್ವೆ ಸಮಗ್ರ ಅಭಿವೃದ್ಧಿ ಸೂಚ್ಯಂಕ ಪಟ್ಟಿಯಲ್ಲಿ ತನ್ನ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಉದಯೋನ್ಮುಖ ಆರ್ಥಿಕತೆಯ ದೇಶಗಳ ಪೈಕಿ ಲಿಥುವೆನಿಯಾ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.
ಕಳೆದ ವರ್ಷ 79 ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿ ಭಾರತವು 60ನೇ ರ್ಯಾಂಕ್‌ನಲ್ಲಿದ್ದರೆ, ಚೀನಾ 15ನೇ ಹಾಗೂ ಪಾಕ್ 52ನೇ ಸ್ಥಾನದಲ್ಲಿದ್ದವು.
ಜಗತ್ತಿನ 103 ರಾಷ್ಟ್ರಗಳ ಆರ್ಥಿಕತೆಯನ್ನು 2018ರ ಸಮಗ್ರ ಅಭಿವೃದ್ಧಿ ಸೂಚ್ಯಂಕ ತಯಾರಿಕೆಯಲ್ಲಿ ಪರಿಗಣಿಸಲಾಗಿತ್ತು. ಈ ಪಟ್ಟಿಯನ್ನು 29 ದೇಶಗಳನ್ನು ಅಭಿವೃದ್ಧಿ ಹೊಂದಿರುವ ಆರ್ಥಿಕತೆಗಳೆಂದು ಹಾಗೂ 74 ದೇಶಗಳನ್ನು ಉದಯೋನ್ಮುಖ ಆರ್ಥಿಕತೆಗಳೆಂದು ಎರಡು ಭಾಗಗಳಾಗಿ ವಿಭಜಿಸಲಾಗಿತ್ತು.
ಸಮಗ್ರ ಅಭಿವೃದ್ಧಿ ಸೂಚ್ಯಂಕ ಪಟ್ಟಿಯನ್ನು ತಯಾರಿಸುವಾಗ ಜನ ಜೀವನಮಟ್ಟ, ಪರಿಸರ ಧಾರಣಾಶೀಲ ಸಾಮರ್ಥ್ಯ ಹಾಗೂ ಋಣಭಾರದಿಂದ ಮುಂದಿನ ತಲೆಮಾರನ್ನು ರಕ್ಷಿಸುವುದು ಇತ್ಯಾದಿ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಡಬ್ಲ್ಯುಇಎಫ್ ವರದಿ ತಿಳಿಸಿದೆ.