ಕೆಎಸ್ಸಾರ್ಟಿಸಿಯಲ್ಲಿ ರಿಯಾಯಿತಿ ದರದ ಟಿಕೆಟ್ ಖರೀದಿಗೆ ಹಿರಿಯ ನಾಗರಿಕರಿಗೆ ಅವಕಾಶ
ಬೆಂಗಳೂರು,ಜ.22: ಹಿರಿಯ ನಾಗರಿಕರಿಗೆ ಕೆಎಸ್ಸಾರ್ಟಿಸಿ ನೀಡುತ್ತಿದ್ದ ಹಿರಿಯ ನಾಗರಿಕರ ಗುರುತಿನ ಚೀಟಿಯನ್ನು ಸ್ಥಗಿತಗೊಳಿಸಿದೆ. ಇದಕ್ಕೆ ಪರ್ಯಾಯವಾಗಿ ಸರಕಾರದಿಂದ ಮಾನ್ಯತೆ ಪಡೆದ ಗುರುತಿನ ಚೀಟಿ ತೋರಿಸಿ ರಿಯಾಯಿತಿ ದರದಲ್ಲಿ ಟಿಕೆಟ್ ಖರೀದಿಸಬಹುದಾಗಿದೆ.
ಸರಕಾರಿ ಗುರುತಿನ ಚೀಟಿ ಹೊಂದಿರುವ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕೆಎಸ್ಸಾರ್ಟಿಸಿ ವತಿಯಿಂದ ನಗರ, ಹೊರವಲಯದಲ್ಲಿ ಸಂಚರಿಸುವ ಸಾಮಾನ್ಯ, ವೇಗದೂತ, ಸೇರಿದಂತೆ ರಾಜಹಂಸ ಬಸ್‌ಗಳಲ್ಲಿ ಶೇ.25 ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಈ ಸೌಲಭ್ಯ ಪಡೆಯಲು, ವಯಸ್ಸಿನ ದೃಢೀಕರಣಕ್ಕಾಗಿ ಗುರುತಿನ ಚೀಟಿಯ ಮೂಲಪ್ರತಿಯನ್ನು ನಿರ್ವಾಹಕರಿಗೆ ತೋರಿಸಿ ಟಿಕೆಟ್ ದರದಲ್ಲಿ ರಿಯಾಯಿತಿ ಖರೀದಿಸಬಹುದಾಗಿದೆ. ಕೆಎಸ್ಸಾರ್ಟಿಸಿ ಹಿರಿಯ ನಾಗರಿಕರ ಗುರುತಿನ ಚೀಟಿಯ ವಿತರಣೆ ಸ್ಥಗಿತಗೊಳಿಸಿದ್ದರೂ ಈಗಾಗಲೇ ವಿತರಿಸಿರುವ ಗುರುತಿನ ಚೀಟಿಗಳು ಮಾನ್ಯತೆ ಹೊಂದಿರುತ್ತವೆ.
ಗುರುತಿನ ಚೀಟಿಗಳು: ಪಾಸ್‌ಪೋರ್ಟ್, ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಸರಕಾರದ ಇಲಾಖೆಗಳಿಂದ ವಿತರಿಸಿರುವ ಗುರುತಿನ ಚೀಟಿ, ಉದ್ಯೋಗ ಖಾತ್ರಿ ಗುರುತಿನ ಚೀಟಿ, ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಲ್ಯಾಣ ಗುರುತಿನ ಚೀಟಿ ಸೇರಿದಂತೆ ಕೆಎಸ್ಸಾರ್ಟಿಸಿ ವಿತರಿಸಿರುವ ಹಿರಿಯ ನಾಗರಿಕರ ಗುರುತಿನ ಚೀಟಿ ತೋರಿಸಿ ರಿಯಾಯಿತಿ ದರದಲ್ಲಿ ಟಿಕೆಟ್ ಖರೀದಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.





