ಸರಕಾರಿ ಆದೇಶದಲ್ಲಿ ತಪ್ಪು ನಮೂದು: 25 ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಕಷ್ಟ
ಬೆಂಗಳೂರು, ಜ.22: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿಭಾಗದ ಜಂಟಿ ನಿರ್ದೇಶಕರು ಸರಕಾರಿ ಆದೇಶದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಸಂಯೋಜಿತ ಸರಕಾರಿ ಕಾಲೇಜುಗಳು ಎಂದು ನಮೂದಿಸುವ ಬದಲಿಗೆ ಸ್ನಾತಕೋತ್ತರ ಕೇಂದ್ರಗಳು ಎಂದು ನಮೂದಿಸಿರುವುದರಿಂದ ಸಂಯೋಜಿತ ಕಾಲೇಜುಗಳಲ್ಲಿ ಪಿಎಚ್‌ಡಿ ಮಾಡುತ್ತಿರುವ 25 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದ ವಂಚಿತರಾಗಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಮೊದಲ ಮೂರು ವರ್ಷದಲ್ಲಿ ತಿಂಗಳಿಗೆ ಎಂಟು ಸಾವಿರದಂತೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ನಂತರದ 4-5ನೆ ವರ್ಷದಲ್ಲಿ ತಿಂಗಳಿಗೆ ಹತ್ತು ಸಾವಿರ ರೂ.ಗಳ ಹಣದ ಜೊತೆಗೆ ಉಚಿತ ಲ್ಯಾಪ್‌ಟ್ಯಾಪ್ ವಿತರಿಸಲಾಗುತ್ತದೆ. ಆದರೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಸಂಯೋಜಿತ ಸರಕಾರಿ ಕಾಲೇಜುಗಳು ಎಂಬುದರ ಬದಲಿಗೆ ಸ್ನಾತಕೋತ್ತರ ಕೇಂದ್ರಗಳು ನಮೂದಿಸಿದ್ದರಿಂದ ಸಂಯೋಜಿತ ಸರಕಾರಿ ಕಾಲೇಜಿನಲ್ಲಿ ಪಿಎಚ್‌ಡಿ ಮಾಡುತ್ತಿರುವವರಿಗೆ ಸರಕಾರಿ ಸೌಲಭ್ಯ ಸಿಗದಂತಾಗಿದ್ದು, ಆತಂಕದ ಸ್ಥಿತಿಯಲ್ಲಿದ್ದಾರೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಸಂಯೋಜಿತ ಸರಕಾರಿ ಕಾಲೇಜುಗಳಲ್ಲಿ 25 ವಿದ್ಯಾರ್ಥಿಗಳು ಸಂಶೋಧನೆ ಮಾಡುತ್ತಿದ್ದು, ಅದರಲ್ಲಿ 11 ವಿದ್ಯಾರ್ಥಿಗಳು ಕಿರಿಯ ಸಂಶೋಧನಾ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿಲ್ಲ. ಇನ್ನುಳಿದ 14 ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಎರಡು ವರ್ಷಗಳಿಂದ ಯಾವುದೇ ಸೌಲಭ್ಯ ನೀಡಿಲ್ಲ ಎಂದು ಸೌಲಭ್ಯ ವಂಚಿತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಇಲಾಖೆಯಿಂದ ಸಿಗಬೇಕಾದ ಸಹಾದಧನ ಹಾಗೂ ಇನ್ನಿತರೆ ಸೌಲಭ್ಯಗಳನ್ನು ನೀಡುವಂತೆ ಹಲವು ಬಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೇ ವಂಚಿಸಲಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯರಿಗೆ ವಿದ್ಯಾರ್ಥಿವೇತನ, ಲ್ಯಾಪ್‌ಟಾಪ್ ನೀಡುವಂತೆ ಮನವಿ ಮಾಡಿದ್ದೆವು. ಅವರು ಭರವಸೆಯನ್ನೂ ನೀಡಿದ್ದರು. ಆದರೆ, ಇಲಾಖೆಯ ಅಧಿಕಾರಿಗಳು ಮಾಡಿದ ತಪ್ಪಿನಿಂದ ನಮಗೆ ಸವಲತ್ತು ಕೈತಪ್ಪಿದೆ ಎಂದು ಸಂಶೋಧನಾ ವಿದ್ಯಾರ್ಥಿಗಳು ದೂರಿದ್ದಾರೆ.
ಪರಿಶಿಷ್ಟ ಪಂಗಡಗಳ ಉಪಯೋಜನೆ ಕಾಯ್ದೆ 2013ರ ಅಡಿಯಲ್ಲಿ ಇಲಾಖೆಗೆ ಮಂಜೂರಾಗಿ ಬಳಕೆಯಾಗದೆ ಉಳಿದ 38.22 ಕೋಟಿ ರೂ. ಹಣದಲ್ಲಿ ಎಸ್ಸಿ-ಎಸ್ಟಿ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ನೀಡಲು ಉನ್ನತ ಶಿಕ್ಷಣ ಇಲಾಖೆಯಿಂದ 2 ಕೋಟಿ ರೂ.ಗಳನ್ನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ.
ಅಲ್ಲದೆ, ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ನೀಡುವ ಸೌಲಭ್ಯವನ್ನು ಸಂಯೋಜಿತ ಕಾಲೇಜಿನ ಸಂಶೋಧನಾ ವಿದ್ಯಾರ್ಥಿಗಳಿಗೂ ನೀಡಬೇಕು ಎಂದು ಆದೇಶದಲ್ಲಿ ಹೇಳಿದ್ದರೂ, ಈ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳಲ್ಲಿ 2013-14ನೆ ಸಾಲಿನಿಂದ ಪಿಎಚ್‌ಡಿ ಅಧ್ಯಯನಕ್ಕೆ ಅವಕಾಶ ನೀಡಿದೆ. ಪ್ರಾರಂಭದಲ್ಲಿ ಮೂರು ಜನರಿಗೆ ಸಂಶೋಧನಾ ವೇತನ ಹಾಗೂ ಲ್ಯಾಪ್‌ಟಾಪ್ ನೀಡಲಾಗಿತ್ತು. ಆದರೆ, 2016-17ನೆ ಸಾಲಿನಲ್ಲಿ ಸ್ಥಗಿತಗೊಳಿಸಲಾಗಿದೆ
-ಎನ್.ಕೃಷ್ಣ, ಸಂಶೋಧನಾ ವಿದ್ಯಾರ್ಥಿ ಸರಕಾರಿ ಕಾಲೇಜು







