ಇಸ್ಲಾಮ್, ಮುಸ್ಲಿಮ್ ಗುಲಾಮಗಿರಿಯ ಸಂಕೇತವಲ್ಲ, ಅದೊಂದು ಉಜ್ವಲ ವ್ಯವಸ್ಥೆ: ರಫೀಉದ್ದೀನ್ ಕುದ್ರೋಳಿ
ಅರಿಯಿರಿ ಮನುಕುಲದ ಪ್ರವಾದಿಯನ್ನು' ಕಾರ್ಯಕ್ರಮ

ಮಂಗಳೂರು, ಜ. 2: ಫೆ. 9ರತನಕ “ರಾಷ್ಟ್ರೀಯತೆ, ಜಾತ್ಯಾತೀತತೆ ಹಾಗೂ ಸ್ವಚ್ಛತೆ ಮತ್ತು ಪ್ರವಾದಿ ಮುಹಮ್ಮದ್(ಸ)” ಎಂಬ ವಿಷಯದಲ್ಲಿ ಯುನಿವೆಫ್ ಕರ್ನಾಟಕ ಆಯೋಜಿಸಿರುವ “ಅರಿಯಿರಿ ಮನುಕುಲದ ಪ್ರವಾದಿಯನ್ನು” ಎಂಬ ಅಭಿಯಾನದ ಪ್ರಯುಕ್ತ ಉಳ್ಳಾಲದ ನಗರಸಭೆ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ “ಭಾರತದ ಮುಸ್ಲಿಮರ ವರ್ತಮಾನ ಮತ್ತು ಭವಿಷ್ಯ” ಎಂಬ ವಿಷಯದಲ್ಲಿ ರಫೀಉದ್ದೀನ್ ಕುದ್ರೋಳಿ ಮಾತನಾಡಿದರು.
“ಜಗತ್ತಿನ ಬಹುತೇಕ ಭೂ ಭಾಗಕ್ಕೆ ಹರಡಿರುವ ಮತ್ತು ಜಗತ್ತಿನ ಐವರಲ್ಲಿ ಓರ್ವ ಅನುಯಾಯಿಯನ್ನು ಹೊಂದಿರುವ ಇಸ್ಲಾಮ್ ಮತ್ತು ಅದರ ಅನುಯಾಯಿಗಳಾದ ಮುಸ್ಲಿಮರು ಎಂದೂ ಜಗತ್ತಿನ ಗುಲಾಮರಾಗಲು ಸಾಧ್ಯವಿಲ್ಲ. ಅದು ಗುಲಾಮಗಿರಿಯ ವಿಮೋಚಕ ಧರ್ಮವಾಗಿದೆ ಮತ್ತು ಮುಸಲ್ಮಾನರು ಅದರ ವಾಹಕರಾಗಿದ್ದಾರೆ.” ಎಂದು ಅವರು ಹೇಳಿದರು.
“ಪರಿಸ್ಥಿತಿಯನ್ನು ಅವಲೋಕಿಸಿ ನಿರಾಶರಾಗದೆ ಸವಾಲುಗಳನ್ನು ಎದುರಿಸಿ ಕುರ್‌ಆನ್ ಹಾಗೂ ಪ್ರವಾದಿ (ಸ) ಸಂದೇಶ ಅನುಸಾರ ಯೋಜನಾಬದ್ಧವಾಗಿ ತಮ್ಮ ಬದುಕನ್ನು ರೂಪಿಸಬೇಕು” ಎಂದೂ ಕರೆ ನೀಡಿದರು.
ಜಿಲ್ಲಾಧ್ಯಕ್ಷ ಸೈಫುದ್ದೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸಲಹಾ ಸಮಿತಿ ಸದಸ್ಯ ಅಬ್ದುಲ್ಲಾ ಪಾರೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಝುಲ್ಫಿಕರ್ ಕಾಸಿಮ್ ಕಿರ್‌ಅತ್ ಪಠಿಸಿದರು.





