ಅತ್ತೂರು ಬಸಿಲಿಕದ ವಾರ್ಷಿಕ ಮಹೋತ್ಸವ: ರೋಗಿಗಳಿಗಾಗಿ ಬಲಿಪೂಜೆ

ಕಾರ್ಕಳ, ಜ.22: ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬಸಿಲಿಕಾದ ವಾರ್ಷಿಕ ಮಹೋತ್ಸವದ ಎರಡನೇ ದಿನದ ಸೋಮವಾರ ಬೆಳಗ್ಗೆ ಮತ್ತು ಮಧ್ಯಾಹ್ನ ರೋಗಿಗಳಿಗಾಗಿ ದಿವ್ಯ ಬಲಿಪೂಜೆಯನ್ನು ಅರ್ಪಿಸಿ ವಿಶೇಷ ಪ್ರಾರ್ಥನೆಯನ್ನು ಮಾಡಲಾಯಿತು.
ಈ ಬಲಿಪೂಜೆಗಳನ್ನು ಉಡುಪಿ ಕಲ್ಮಾಡಿ ಧರ್ಮಕೇಂದ್ರದ ಧರ್ಮ ಗುರು ವಂ.ಅಲ್ಬನ್ ಡಿಸೋಜ ಹಾಗೂ ವಂ.ರೆಜಿನಾಲ್ಡ್ ಪಿಂಟೊ ನೆರವೇರಿಸಿದರು. ಬಳಿಕ ಮಾತನಾಡಿದ ವಂ.ಅಲ್ಬನ್ ಡಿಸೋಜ, ರೋಗ ರುಜಿನಗಳಿಂದ ಕಷ್ಟಪಡು ವವರಲ್ಲಿ ದೇವರನ್ನು ಕಂಡು ಅವರಿಗೆ ಸಲ್ಲಿಸಿದ ಸೇವೆಯು ಭಗವಂತನಿಗೆ ಸಲ್ಲುತ್ತದೆ. ದೈಹಿಕ ಹಾಗೂ ಮಾನಸಿಕ ರೋಗಗಳಿಂದ ಬವಣೆ ಪಡುತ್ತಿರುವವರ ಸಂತೈಸುವ ಮನಸ್ಸುಗಳು ನಮ್ಮದಾಗಬೇಕು ಎಂದು ಹೇಳಿದರು.
ನೂರಾರು ಮಂದಿ ರೋಗಿಗಳು, ದಿವ್ಯಚೇತನರು ಹಾಗೂ ವಯೋವೃದ್ಧರು ತಮ್ಮ ಕುಟುಂಬದ ಸದಸ್ಯರ ಸಹಾಯದಿಂದ ಪುಣ್ಯಕ್ಷೇತ್ರಕ್ಕೆ ಬಂದು ವಿಶೇಷ ಬಲಿಪೂಜೆಯಲ್ಲಿ ಪಾಲ್ಗೊಂಡರು. ದಿನದ ಪ್ರಧಾನ ಬಲಿಪೂಜೆಯನ್ನು ಬೆಳ್ತಂಗಡಿ ಧರ್ಮಪ್ರಾಂತದ ಸದಸ್ಯ ರೆ.ಫಾ.ಡಾ.ಲಾರೆನ್ಸ್ ಮುಕ್ಕುಝಿ ನೆರವೇರಿಸಿದರು.
ಕಾರ್ಕಳ ಶಾಸಕ ಸುನಿಲ್ ಕುಮಾರ್, ಮಾಜಿ ಶಾಸಕ ಗೋಪಾಲ ಭಂಡಾರಿ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದರು. ವಿಧಾನ ಪರಿಷತ್ ಸಚೇತಕ ಐವನ್ ಡಿಸೋಜ ಪತ್ನಿ ಸಮೇತ ದಿವ್ಯ ಬಲಿಪೂಜೆಯಲ್ಲಿ ಭಾಗವಹಿಸಿದರು. ಉಡುಪಿಯ ಧರ್ಮಾಧ್ಯಕ್ಷರಾದ ಡಾ.ಜೆರಾಲ್ಡ್ ಲೋಬೆ ಗಣ್ಯರನ್ನು ಬರಮಾಡಿಕೊಂಡರು.







