ವಾಹನ ಪಾರ್ಕಿಂಗ್ ಪ್ರದೇಶದ ವ್ಯವಹಾರದಲ್ಲಿ ಅಕ್ರಮವಿಲ್ಲ: ಪೇಜಾವರ ಶ್ರೀ ಸ್ಪಷ್ಟನೆ

ಉಡುಪಿ, ಜ.22: ಶ್ರೀ ಕೃಷ್ಣ ಮಠಕ್ಕೆ ಸೇರಿದ ರಾಜಾಂಗಣದ ಹಿಂಭಾಗದಲ್ಲಿರುವ ವಾಹನ ಪಾರ್ಕಿಂಗ್ ಪ್ರದೇಶದ ವ್ಯವಹಾರದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಈ ಪ್ರದೇಶದಲ್ಲಿ ಅಂಗಡಿಯನ್ನು ವಿಷ್ಣುಮೂರ್ತಿ ಆಚಾರ್ಯರಿಗೆ ನೀಡಿದ ಜಾಗವು ಅಧಿಕೃತವೇ ಆಗಿದೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀ ಪತ್ರಿಕಾ ಹೇಳಿಕೆಯ ಮೂಲಕಸ್ಪಷ್ಟನೆ ನೀಡಿದ್ದಾರೆ.
ಶ್ರೀ ಕೃಷ್ಣ ಮಠದ ಹಿಂಭಾಗದ ವಾಹನ ನಿಲುಗಡೆ ಪ್ರದೇಶ ಅಷ್ಟಮಠದ ಸ್ವಾಮೀಜಿಗಳನ್ನೊಳಗೊಂಡ ಶ್ರೀಕೃಷ್ಣ ಪರಿಸರ ಪ್ರತಿಷ್ಠಾನದ ಅಧೀನದಲ್ಲಿದ್ದು, ಕಳೆದ ಗುರುವಾರ ಪೇಜಾವರ ಶ್ರೀಗಳು ಪರ್ಯಾಯ ಪೀಠದಿಂದ ಇಳಿದು ಪಲಿಮಾರು ಶ್ರೀಗಳು ಪರ್ಯಾಯದ ಅಧಿಕಾರ ವಹಿಸಿಕೊಳ್ಳುತಿದ್ದಂತೆ, ಶುಕ್ರವಾರ ಈ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತಿದ್ದ ಎರಡು ಅಂಗಡಿಗಳನ್ನು ಯಾವುದೇ ನೋಟೀಸು ನೀಡದೇ ಶೀರೂರು ಮಠದ ಶ್ರೀಲಕ್ಷ್ಮಿವರತೀರ್ಥ ಶ್ರೀ ಸೂಚನೆಯಂತೆ ಜೆಸಿಬಿ ತಂದು ಎಲ್ಲಾ ವಸ್ತುಗಳು ಅಂಗಡಿಯಲ್ಲಿ ಇರುವಂತೆಯೇ ಉರುಳಿಸಲಾಗಿತ್ತು.
ವಿಷ್ಣುಮೂರ್ತಿ ಆಚಾರ್ಯರು ಕಳೆದ 13 ವರ್ಷಗಳಿಂದ ನಮ್ಮಿಂದ ಸಂಬಳವನ್ನೇ ಪಡೆಯದೇ ಅದರ 15 ಲಕ್ಷ ರೂ.ಗಳನ್ನು ಅಲ್ಲಿ ನಿರ್ಮಾಣವಾಗುತ್ತಿರುವ ಯಾತ್ರಿ ನಿವಾಸದ ವಿಸ್ತರಣೆಗಾಗಿ ನೀಡಿದ್ದಾರೆ. ಆದ್ದರಿಂದ ಟ್ರಸ್ಟ್‌ಗೆ ಯಾವುದೇ ನಷ್ಟ ಉಂಟಾಗಿಲ್ಲ. ಆದರೂ ಸಂಘರ್ಷ ಬೆಳೆಯಬಾರದೆಂಬ ಉದ್ದೇಶಕ್ಕಾಗಿ ಆ ಜಾಗವನ್ನು ತೆರವು ಮಾಡುವಂತೆ ತಿಳಿಸಿದ್ದು, ಅವರು ಒಪ್ಪಿಕೊಂಡಿದ್ದಾರೆ ಎಂದು ಪೇಜಾವರ ಶ್ರೀ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರತಿಷ್ಠಾನ ಸ್ಪಷ್ಟನೆ: ಶ್ರೀಕೃಷ್ಣ ಪರಿಸರ ಪ್ರತಿಷ್ಠಾನದ ವ್ಯವಸ್ಥಾಪಕರು ಈ ಕುರಿತು ಸ್ಪಷ್ಟನೆ ನೀಡಿದ್ದು, ಪ್ರತಿಷ್ಠಾನದ ವಿಶ್ವಸ್ಥರ ಒಪ್ಪಿಗೆಯಲ್ಲಿ ಕಳೆದ 13 ವರ್ಷಗಳ ಹಿಂದೆ ಅಲ್ಲಿಯ ಚಟುವಟಿಕೆಗಳನ್ನು ನೋಡಿಕೊಳ್ಳಲು ಅನುಕೂಲವಾಗುವಂತೆ ಕೆ.ವಿಷ್ಣುಮೂರ್ತಿ ಆಚಾರ್ಯರಿಗೆ ಮಳಿಗೆಗಳನ್ನು ನೀಡಲಾಗಿತ್ತು. ಅದು ಪ್ರತಿಷ್ಠಾನದ ಒಪ್ಪಿಗೆ ಪತ್ರದೊಂದಿಗೆ ನಗರಸಭಾ ಪರವಾನಿಗೆ ಹಾಗೂ ವಿದ್ಯುತ್ ಇಲಾಖೆಯ ಖಾಯಂ ಪರವಾನಿಗೆಯೊಂದಿಗೆ ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಅಂಗಡಿಗಳಲ್ಲಿ ಯಾವುದೇ ನಕಲಿ ವಸ್ತುಗಳಿಲ್ಲ. ಮಾರಾಟ ದರವು ಉಳಿದೆಲ್ಲಾ ಅಂಗಡಿಗಳಷ್ಟೇ ಇದೆ. ಆದರೂ ಕೆಲವರು ತಪ್ಪು ಮಾಹಿತಿಗಳಿಂದ ಕಾನೂನು ಕೈಗೆತ್ತಿಕೊಂಡು ದಾಳಿ ನಡೆಸಿ ಅಪಾರ ಹಾನಿ ಉಂಟು ಮಾಡಿದ್ದಾರೆ. ಆದರೆ ಇದಕ್ಕೆ ಮುನ್ನ ಯಾವುದೇ ನೋಟೀಸ್ ಅಥವಾ ಪ್ರತಿಷ್ಠಾನಕ್ಕೆ ಯಾವುದೇ ಮಾಹಿತಿಯನ್ನೂ ನೀಡಲಾಗಿಲ್ಲ. ಸ್ಥಳೀಯರಲ್ಲದವರೊಂದಿಗೆ ಬಂದು ದಾಂಧಲೆ ನಡೆಸಿ ಕಟ್ಟಡವನ್ನು ಕೆಡವಿದ್ದು, ಅಪಾರ ನಷ್ಟವನ್ನುಂಟು ಮಾಡಿದ್ದಾರೆ ಎಂದು ಹೇಳಿಕೆಯಲ್ಲಿ ದೂರಲಾಗಿದೆ.
ವಾಹನ ನಿಲುಗಡೆ ಬಗ್ಗೆಯೂ ಅಧಿಕೃತ ದರ ನಿಗದಿ ಪಡಿಸಿ ಅದರಂತೆ ಸಂಗ್ರಹ ಮಾಡಲಾಗುತ್ತಿದೆ. ಇದಕ್ಕಾಗಿ ಟ್ರಸ್ಟ್ ವತಿಯಿಂದಲೇ ರಶೀದಿ ಮುದ್ರಿಸಿ ನಿರ್ವಾಹಕರಿಗೆ ನೀಡುತಿದ್ದು, ಪ್ರತಿದಿನ ಸಂಗ್ರಹಿಸಿದ ಮೊತ್ತವನ್ನು ಬ್ಯಾಂಕಿನಲ್ಲಿ ಜಮಾ ಮಾಡಲಾಗುತ್ತಿದೆ. ಹಣ ಸಂಗ್ರಹಕ್ಕೆ ಯಾವುದೇ ನಕಲಿ ರಶೀದಿ ಮುದ್ರಿಸಿಲ್ಲ ಎಂದು ಪ್ರತಿಷ್ಠಾನ ಸ್ಪಷ್ಟಪಡಿಸಿದೆ.
ಈ ನಡುವೆ ಮಾತುಕತೆಯ ಮೂಲಕ ಎರಡೂ ಕಡೆಯವರ ಭಿನ್ನಾಭಿಪ್ರಾಯ ಬಗೆಹರಿದಿದ್ದು, ಅಂಗಡಿಯನ್ನು ಮತ್ತೆ ನಿರ್ಮಿಸಲಾಗಿದೆ ಎಂದು ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.







