'ಪದ್ಮಾವತ್’ ಚಿತ್ರ ವಿರುದ್ಧ ಮಧ್ಯಪ್ರದೇಶ, ರಾಜಸ್ಥಾನ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ
ಕಾನೂನು ಸಮರದಲ್ಲಿ ಗೆದ್ದ ಸಂಜಯ್ ಲೀಲಾ ಬನ್ಸಾಲಿ

ಹೊಸದಿಲ್ಲಿ, ಜ.23: ಇಡೀ ದೇಶದಲ್ಲಿ ಜ.25ರಂದು ‘ಪದ್ಮಾವತ್’ ಚಿತ್ರ ಬಿಡುಗಡೆಗೊಳ್ಳಲಿದೆ. ಹಿಂಸೆ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆ ನಿಷೇಧ ಸಾಧ್ಯವಿಲ್ಲ. ಅರಾಜಕತೆ ಸೃಷ್ಟಿಸುವ ಶಕ್ತಿಗಳನ್ನು ಉತ್ತೇಜಿಸಲು ಸಾಧ್ಯವಿಲ್ಲ. ಕಾನೂನು-ಸುವ್ಯವಸ್ಥೆ ಕಾಪಾಡುವುದು ಆಯಾ ರಾಜ್ಯ ಸರಕಾರಗಳ ಕರ್ತವ್ಯ. ಎಲ್ಲರೂ ನ್ಯಾಯಾಲಯದ ಆದೇಶ ಪಾಲಿಸಲೇಬೇಕು ಎಂದು ಸುಪ್ರೀಂಕೋರ್ಟ್ ಮಂಗಳವಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಮಧ್ಯಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳು ಸುಪ್ರೀಂಕೋರ್ಟ್ ಜ.18 ರಂದು ‘ಪದ್ಮಾವತ್’ ಚಿತ್ರದ ಮೇಲಿನ ನಿಷೇಧ ಹಿಂಪಡೆದಿರುವ ಆದೇಶವನ್ನು ಪುನರ್ಪರಿಶೀಲನೆ ನಡೆಸಬೇಕೆಂದು ಅರ್ಜಿಯನ್ನು ಸಲ್ಲಿಸಿದ್ದವು. ಸುಪ್ರೀಂಕೋರ್ಟ್ ಈ ಎರಡು ರಾಜ್ಯಗಳು ಸಲ್ಲಿಸಿರುವ ಅರ್ಜಿಗಳನ್ನು ವಜಾಗೊಳಿಸಿದೆ.
ಜ.18 ರಂದು ತಾನು ನೀಡಿದ್ದ ಆದೇಶವನ್ನು ಎರಡೂ ರಾಜ್ಯಗಳು ಪಾಲಿಸಲೇಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.
ವಿವಾದಾತ್ಮಕ ಚಿತ್ರಗಳ ಪ್ರದರ್ಶನದ ವೇಳೆ ಕಾನೂನು ಸುವವ್ಯಸ್ಥೆಗೆ ಭಂಗ ಬರುತ್ತದೆ ಎಂಬ ಎರಡು ರಾಜ್ಯ ಸರಕಾರಗಳ ವಾದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ, ರಾಜ್ಯಗಳು ಸ್ವತಃ ಸಮಸ್ಯೆಯನ್ನು ಸೃಷ್ಟಿಸಿ ಚಿತ್ರ ಬಿಡುಗಡೆಗೆ ನಿಷೇಧ ಹೇರಬೇಕೆಂದು ನ್ಯಾಯಾಲಯದ ಮೊರೆ ಹೋಗಿರುವುದು ಸರಿಯಲ್ಲ. ‘ಪದ್ಮಾವತ್’ ಚಿತ್ರ ಬಿಡುಗಡೆ ವೇಳೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದೆ.
ಸುಪ್ರೀಂಕೋರ್ಟಿನ ಈ ತೀರ್ಪಿನ ಮೂಲಕ ‘ಪದ್ಮಾವತ್’ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಕಾನೂನು ಹೋರಾಟದಲ್ಲಿ ದೊಡ್ಡ ಜಯ ಸಾಧಿಸಿದ್ದಾರೆ.
ಕರ್ಣಿ ಸೇನಾ ಸಂಘಟನೆಗಳಿಂದ ತೀವ್ರ ವಿರೋಧಕ್ಕೆ ಗುರಿಯಾಗಿರುವ ‘ಪದ್ಮಾವತ್’ ಚಿತ್ರ ಪ್ರದರ್ಶನವನ್ನು ಸಿನೆಮಟೋಗ್ರಾಫ್ ಕಾಯ್ದೆಯ ಸೆಕ್ಷನ್-6ರ ಅನ್ವಯ ಕಾನೂನು ಸುವವ್ಯಸ್ಥೆ ಧಕ್ಕೆ ತರುವ ವಿವಾದಾತ್ಮಕ ಸಿನೆಮಾಗಳ ನಿಷೇಧಿಸಬೇಕು ಎಂದು ಆಗ್ರಹಿಸಿ ರಾಜಸ್ಥಾನ ಹಾಗೂ ಮಧ್ಯಪ್ರದೇಶ ಸರಕಾರಗಳು ಅರ್ಜಿ ಸಲಿಸಿದ್ದವು.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ಜಸ್ಟಿಸ್ಗಳಾದ ಎಂ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ್ ಅವರಿದ್ದ ಪೀಠ ರಾಜ್ಯಗಳು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸೋಮವಾರ ಸಮ್ಮತಿಸಿತ್ತು.
ಹಿರಿಯ ವಕೀಲ ಹರೀಶ್ ಸಾಳ್ವೆ ಚಿತ್ರ ನಿರ್ಮಾಪಕ ಸಂಸ್ಥೆಯ ಪರ ನ್ಯಾಯಾಲಯದಲ್ಲಿ ಹಾಜರಿದ್ದರು. ಸುಪ್ರೀಂಕೋರ್ಟ್ ಜ.18 ರಂದು ನೀಡಿರುವ ತೀರ್ಪಿನಲ್ಲಿ ‘ಪದ್ಮಾವತ್’ ಚಿತ್ರವನ್ನು ಜ.25 ರಂದು ದೇಶಾದ್ಯಂತ ಬಿಡುಗಡೆ ಮಾಡಲು ಹಾದಿ ಸುಗಮಗೊಳಿಸಿತ್ತು.