‘ವಿದೇಶಿ ನಾಯಕರೊಂದಿಗೆ ಗಾಳಿಪಟ ಹಾರಿಸುವವರು ನಮ್ಮ ನಾಯಕರು’
ಪ್ರಧಾನಮಂತ್ರಿ ವಿರುದ್ಧ ಉದ್ದವ್ ಠಾಕ್ರೆ ವಾಗ್ದಾಳಿ

ಮುಂಬೈ, ಜ.23: ಶಿವಸೇನೆಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಮಂಗಳವಾರ ನಡೆದಿದ್ದು, ಈ ವೇಳೆ ಪಕ್ಷದ ಮುಖ್ಯಸ್ಥ ಉದ್ದವ್ ಠಾಕ್ರೆ ಪಕ್ಷದ ಅಧ್ಯಕ್ಷನಾಗಿ ಮರು ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಸಹಿತ ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘‘ಮುಂಬೈನಲ್ಲಿ ನಡೆದ ಕಾರ್ಯಕ್ರಮದ ವೇಳೆ ನಿತಿನ್ ಗಡ್ಕರಿ ಸೇನಾಪಡೆಯ ಬಗ್ಗೆ ನೀಡಿರುವ ಹೇಳಿಕೆ ನನಗೆ ಬೇಸರ ತಂದಿದೆ. ಸೈನಿಕರು ಗಡಿಯಲ್ಲಿ ದೇಶ ಕಾಯಬೇಕೆಂದು ಬಯಸುತ್ತೀರಿ. ಸರ್ಜಿಕಲ್ ಸ್ಟ್ರೈಕ್ ನಡೆದಾಗ ತಾವೇ ಅದರ ಶ್ರೇಯಸ್ಸು ಪಡೆಯುತ್ತೀರಿ’’ ಎಂದರು.
ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಉದ್ದವ್,‘‘ನಮ್ಮಲ್ಲಿ ಬಲಿಷ್ಠ ನಾಯಕನಿದ್ದಾನೆ ಎಂದು ಜನರು ಭಾವಿಸಿದ್ದಾರೆ. ಆದರೆ, ನಮ್ಮ ನಾಯರೆನಿಸಿಕೊಂಡವರು ಅಹ್ಮದಾಬಾದ್ನಲ್ಲಿ ವಿದೇಶಿ ನಾಯಕ(ಇಸ್ರೇಲ್ ಪ್ರಧಾನಿ)ನೊಂದಿಗೆ ಗಾಳಿಪಟ ಹಾರಿಸಲು ಆಸಕ್ತಿ ತೋರಿಸುತ್ತಾರೆ. ವಿದೇಶದ ನಾಯಕರನ್ನು ಕಾಶ್ಮೀರ ಹಾಗೂ ದೇಶದ ಇತರ ರಾಜ್ಯಗಳಿಗೆ ಕರೆದೊಯ್ಯದೇ ಗುಜರಾತ್ಗೆ ಕರೆದೊಯ್ದ ಉದ್ದೇಶವೇನು? ಎಂದು ಪ್ರಶ್ನಿಸಿದರು.
"ದೇಶ ಅಭಿವೃದ್ದಿಯತ್ತ ಮುನ್ನಡೆಯುತ್ತಿದೆಯೋ, ಹಿಂದಕ್ಕೆ ಹೋಗುತ್ತಿದೆಯೇ ಎಂಬ ಬಗ್ಗೆ ಜನರಲ್ಲಿ ಗೊಂದಲವಿದೆ. ಚುನಾವಣೆ ಬಂದಾಗ ‘ಅಚ್ಚೇ ದಿನ್’ ಎಂಬ ಪದ ಕಿವಿಗೆ ಬೀಳುತ್ತದೆ. ದೇಶದಲ್ಲಿ ಕಾರ್ಖಾನೆಗಳು ಬಾಗಿಲು ಮುಚ್ಚುತ್ತಿವೆ. ಯುವಕರಿಗೆ ಉದ್ಯೋಗ ಇಲ್ಲವಾಗಿದೆ. ದೇಶದ ಜನರಿಗೆ ಹಿಂದಿನ ಹಾಗೂ ಈಗಿನ ಕೇಂದ್ರ ಸರಕಾರದಲ್ಲಿ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಕೇಂದ್ರ ಸರಕಾರ ಜಾಹೀರಾತಿಗಾಗಿ ಕೋಟ್ಯಂತರ ರೂ.ಖರ್ಚು ಮಾಡುತ್ತಿದೆ. ಜನರ ಕಲ್ಯಾಣಕ್ಕೆ ಯಾವುದೇ ಯೋಜನೆ ತರಲಾಗಿಲ್ಲ’’ ಎಂದು ಕಿಡಿಕಾರಿದರು.