ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಮಹಾಭಿಯೋಗ ಗೊತ್ತುವಳಿ
ಸಿಪಿಎಂ ಚಿಂತನೆ

ಹೊಸದಿಲ್ಲಿ,ಜ.23: ಇತರ ಪಕ್ಷಗಳೊಂದಿಗೆ ಸೇರಿಕೊಂಡು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ಮಹಾಭಿಯೋಗ ಗೊತ್ತುವಳಿಯನ್ನು ತರಲು ತಾನು ಚಿಂತನೆ ನಡೆಸುತ್ತಿರುವುದಾಗಿ ಸಿಪಿಎಂ ಹೇಳಿದೆ. ಸರ್ವೋಚ್ಚ ನ್ಯಾಯಾಲಯದ ಆಡಳಿತವು ಕ್ರಮಬದ್ಧವಾಗಿ ನಡೆಯುತ್ತಿಲ್ಲ ಮತ್ತು ಮುಖ್ಯ ನ್ಯಾಯಮೂರ್ತಿಗಳು ತಮ್ಮ ಮನಸೋ ಇಚ್ಛೆ ಪ್ರಕರಣಗಳ ಹಂಚಿಕೆ ಮಾಡುತ್ತಿದ್ದಾರೆ ಎಂದು ನಾಲ್ವರು ಹಿರಿಯ ನ್ಯಾಯಾಧೀಶರು ಇತ್ತೀಚಿಗೆ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದ ಹಿನ್ನೆಲೆಯಲ್ಲಿ ಸಿಪಿಎಂನ ಈ ಹೇಳಿಕೆ ಹೊರಬಿದ್ದಿದೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿಎಂ ನಾಯಕ ಸೀತಾರಾಮ ಯೆಚೂರಿ ಅವರು, ಈ ಪರಿಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಏನಾದರೂ ತಪ್ಪುಗಳು ನಡೆಯುತ್ತಿದ್ದರೆ ಅದನ್ನು ಸರಿಪಡಿಸಲು ಮಹಾಭಿಯೋಗ ಗೊತ್ತುವಳಿಯ ಹೊರತು ಬೇರೆ ಮಾರ್ಗಗಳಿಲ್ಲ. ಜ.29ರಂದು ಆರಂಭಗೊಳ್ಳಲಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಈ ಗೊತ್ತುವಳಿಯನ್ನು ಮಂಡಿಸುವ ಸಾಧ್ಯತೆಯ ಬಗ್ಗೆ ಇತರ ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.
Next Story