ಪ್ರಧಾನಿ, ಆದಿತ್ಯನಾಥ್‌ಗೆ ರಕ್ತದಲ್ಲಿ ಪತ್ರ ಬರೆದ ಅತ್ಯಾಚಾರ ಸಂತ್ರಸ್ತೆ
“ನನಗೆ ನ್ಯಾಯ ಕೊಡಿಸಿ”

ಲಕ್ನೊ, ಜ.23: ತನಗೆ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿ ಅತ್ಯಾಚಾರ ಸಂತ್ರಸ್ತೆಯೊಬ್ಬಳು ತನ್ನ ರಕ್ತದಿಂದಲೇ ಪ್ರಧಾನಿ ಮೋದಿ ಮತ್ತು ಉ.ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಪತ್ರ ಬರೆದ ಘಟನೆ ಉ.ಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದಿದೆ.
“ಆರೋಪಿಗಳು ಪ್ರಭಾವಿಗಳಾಗಿರುವ ಕಾರಣ ಪೊಲೀಸರು ಅವರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ. ಬದಲಾಗಿ ಪೊಲೀಸರು ದೂರು ವಾಪಸ್ ಪಡೆಯುವಂತೆ ನನ್ನ ಮೇಲೆ ಒತ್ತಡ ಹಾಕುತ್ತಿದ್ದಾರೆ. ನನಗೆ ನ್ಯಾಯಬೇಕು ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಇಂಜಿನಿಯರ್ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ ಜನವರಿ 20ರಂದು ಬರೆದ ಪತ್ರದಲ್ಲಿ ತಿಳಿಸಿದ್ದಾಳೆ.
ಸಂತ್ರಸ್ತೆಯ ತಂದೆ ನೀಡಿರುವ ದೂರಿನಂತೆ ದಿವ್ಯ ಪಾಂಡೆ ಮತ್ತು ಅಂಕಿತ್ ವರ್ಮಾ ಎಂಬವರ ವಿರುದ್ಧ ಅತ್ಯಾಚಾರ ಪ್ರಕರಣದಡಿ ಮಾರ್ಚ್ 24, 2017ರಂದು ದೂರು ದಾಖಲಿಸಲಾಗಿತ್ತು ಎಂದು ಎಎಸ್‌ಪಿ ಶಶಿ ಶೇಖರ್ ಸಿಂಗ್ ತಿಳಿಸಿದ್ದಾರೆ. ತನ್ನ ಮಗಳನ್ನು ಆರೋಪಿಗಳು ಬಾರಾಬಂಕಿ ಪ್ರದೇಶದಲ್ಲಿ ಅತ್ಯಾಚಾರ ಮಾಡಿದ್ದರು ಮತ್ತು ಆನಂತರ ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂದು ಸಂತ್ರಸ್ತೆಯ ತಂದೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಯುವತಿಯ ನಕಲಿ ಫೇಸ್‌ಬುಕ್ ಖಾತೆಯನ್ನು ತೆರೆದು ಅದರಲ್ಲಿ ಆಕೆಯ ಅಶ್ಲೀಲ ಚಿತ್ರಗಳನ್ನು ಹಾಕಲಾಗಿತ್ತು ಎಂದು ರಾಯ್‌ಬರೇಲಿ ಪೊಲೀಸ್ ಠಾಣೆಯಲ್ಲಿ 2017ರ ಅಕ್ಟೋಬರ್‌ನಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಲಾಗಿತ್ತು.