ಲಂಚ ನೀಡದೆ ನಗರಸಭೆಯಲ್ಲಿ ಯಾವುದೇ ಕೆಲಸಗಳು ನಡೆಯುವುದಿಲ್ಲ: ಸಿ.ಎನ್.ಅಕ್ಮಲ್
ಚಿಕ್ಕಮಗಳೂರು, ಜ.23: ಜನಸಾಮಾನ್ಯರಿಗೆ ನಗರಸಭೆಯಲ್ಲಿ ಲಂಚ ನೀಡದೆ ಇದ್ದಲ್ಲಿ ಯಾವುದೇ ಕೆಲಸಗಳುಆಗುವುದಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಿಸಾನ್ ಖೇತ್ ನ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ತಿಳಿಸಿದರು.
ಮಂಗಳವಾರ ವಾರ್ಡ್ ನಂ 17ರ ದುಬೈನಗರ ಮತ್ತು ಕಾಲೋನಿಗಳಿಗೆ ಸ್ವಂತ ಹಣದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ವ್ಯವಸ್ಥೆ ಮತ್ತು ಬೋರ್‍ವೆಲ್ ಕೊರೆಯಿಸಿ ಮಾತನಾಡಿ, ಬಿಜೆಪಿಯ ನಗರಸಭೆ ಸದಸ್ಯರುಗಳು ನಗರಸಭೆಯನ್ನು ವ್ಯಾಪಾರಿ ಕೇಂದ್ರವನ್ನಾಗಿ ಮಾಡಿಕೊಂಡು ಯಾವುದೇ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದರು.
ನಗರಸಭೆ ವತಿಯಿಂದ ಪ್ರತಿ ವರ್ಷ ಕಂದಾಯವನ್ನು 15% ಹೆಚ್ಚು ಮಾಡಿ ಜನರಿಗೆ ತೊಂದರೆ ಆಗುತ್ತಿದೆ. ನಗರದಲ್ಲಿ ರಸ್ತೆ ಗಾಡಿಗಳಿಗೆ ಚಂದಾ ವಸೂಲಿ ಮಾಡಬಾರದೆಂದು ಕೊರ್ಟ್ ಆದೇಶ ನೀಡಿದ್ದರೂ ಚಂದಾ ವಸೂಲಿ ಮಾಡುತ್ತಿದ್ದಾರೆ ಎಂದರು.
ದುಬೈ ನಗರದ ನಿವಾಸಿಗಳು ಕಳೆದ 2 ವರ್ಷಗಳಿಂದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ನಗರಸಭೆ ಅಧ್ಯಕ್ಷರಿಗೆ ಮತ್ತು ಆಯುಕ್ತರಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಇತ್ತೀಚೆಗೆ ನಾನು ಬೇಟಿ ನೀಡಿರುವ ಸಂದರ್ಭದಲ್ಲಿ ಕುಡಿಯುವ ನೀರಿನ ಅಭಾವ ಇದೆ ಎಂದು ತಿಳಿಸಿದರು.
ದುಬೈ ನಗರದ ಅಯ್ಯಪ್ಪ ನಗರದಲ್ಲಿ 2 ಬೋರ್ ವೆಲ್, ಪೆನ್ಸನ್ ಮೋಹಲದಲ್ಲಿ 1, ಬಾರ್ ಲೈನಲ್ಲಿ 1, ಬೋರ್ ವೆಲ್ ತೆಗೆಸಿ ಕುಡಿಯುವ ನೀರಿನ ಪೈಪ್ ಲೈನ್ ವ್ಯವಸ್ಥೆಯನ್ನು ಕಲ್ಪಿಸಿ ಜನರಿಗೆ ಅನುಕೂಲ ಮಾಡಿ ಕೊಟ್ಟಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ನಯಾಜ್, ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಾರಬ್, ಎನ್.ಎಸ್.ಯು.ಐ ನ ಆದಿಲ್, ಯೂತ್ ಕಾಂಗ್ರೆಸ್ ಅಧ್ಯಕ್ಷ ರಾಹಿಲ್ ಶರೀಫ್ ಉಪಸ್ಥಿತರಿದ್ದರು.