'ನೆಹರೂ ದುರಾಸೆಯ ಮುಖಂಡ': ಬಿಜೆಪಿ ರಸಪ್ರಶ್ನೆಗಾಗಿ ವಿತರಿಸಿದ ಕಿರುಹೊತ್ತಿಗೆಯಲ್ಲಿ ಬಣ್ಣನೆ

ಭೋಪಾಲ್, ಜ. 24: ಸಾಮಾನ್ಯ ಜ್ಞಾನದ ಬಗ್ಗೆ ಬಿಜೆಪಿ ಯುವ ಮೋರ್ಚಾ ಏರ್ಪಡಿಸಿದ್ದ ರಸಪ್ರಶ್ನೆ ಕಾರ್ಯಕ್ರಮ ಇದೀಗ ವಿವಾದಕ್ಕೆ ಸಿಲುಕಿಕೊಂಡಿದೆ. ರಸಪ್ರಶ್ನೆಗಾಗಿ ವಿತರಿಸಿದ ಕಿರುಹೊತ್ತಿಗೆಯಲ್ಲಿ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ದುರಾಸೆಯ ಮುಖಂಡ ಎಂದು ಬಣ್ಣಿಸಲಾಗಿದೆ.
ಬಿಜೆಪಿಗೆ ತಿರುಗೇಟು ನೀಡಿರುವ ಕಾಂಗ್ರೆಸ್, "ಸ್ವಾತಂತ್ರ್ಯ ಹೋರಾಟದಲ್ಲಿ ದೀನ್ದಯಾಳ್ ಉಪಾಧ್ಯಾಯ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೊಡುಗೆ ಏನು" ಎಂದು ಪ್ರಶ್ನಿಸಿದೆ.
ಮುಖ್ಯಮಂತ್ರಿ ಶಿವರಾಜ್ಸಿಂಗ್ ಚೌಹಾಣ್ ಅವರೂ ಉಪಸ್ಥಿತರಿದ್ದ ಈ ಸ್ಪರ್ಧೆಯಲ್ಲಿ ಕೇಳಲಾದ ಬಹುತೇಕ ಪ್ರಶ್ನೆಗಳು ರಾಜ್ಯ ಸರ್ಕಾರದ ನೀತಿಗಳಿಗೆ ಸಂಬಂಧಿಸಿದ್ದವು. ಈ ಸಂದರ್ಭ "ಮೇರೇ ದೀನ್ದಯಾಳ್" ಎಂಬ ಕಿರುಹೊತ್ತಿಗೆ ವಿತರಿಸಲಾಗಿದೆ. ಕಿರುಹೊತ್ತಿಗೆ ಮೂಲಕ ಕಾಂಗ್ರೆಸ್ ಮೇಲೆ ದಾಳಿ ನಡೆಸಲಾಗಿದ್ದು, ಒಂದು ಪ್ರಶ್ನೆಯಲ್ಲಿ ನೆಹರೂ ಅವರನ್ನು ಅಧಿಕಾರದ ದುರಾಸೆ ಹೊಂದಿದ ವ್ಯಕ್ತಿ ಎಂದು ಬಣ್ಣಿಸಲಾಗಿದೆ.
ಈ ಬಗ್ಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಮುಖಂಡ ಅಜಯ್ ಸಿಂಗ್, "ಸ್ವಾತಂತ್ರ್ಯ ಹೋರಾಟಕ್ಕೆ ನೆಹರೂ ಅವರ ಕೊಡುಗೆ ಏನು ಎನ್ನುವುದು ಬಿಜೆಪಿಗೆ ತಿಳಿದಿದೆ. ಹಲವು ಬಾರಿ ಅವರು ಜೈಲಿಗೆ ಹೋಗಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯನ್ನು ಅಳಿಸಿ ಹಾಕಲು ಬಿಜೆಪಿ ಹುನ್ನಾರ ನಡೆಸಿದೆ" ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಕೊಡುಗೆಯನ್ನು ಯಾರೂ ಮರೆಯಲಾಗದು. ಸ್ವಾತಂತ್ರ್ಯ ಹೋರಾಟಕ್ಕೆ ಪಂಡಿತ್ ಉಪಾಧ್ಯಾಯ ಅವರ ಕೊಡುಗೆ ಏನು ಎನ್ನುವುದನ್ನು ಬಿಜೆಪಿ ಏಕೆ ಹೇಳುತ್ತಿಲ್ಲ? ಅಂಥ ಕೊಡುಗೆ ಇದ್ದರೆ ಇದಕ್ಕೆ ಸಂಬಂಧಿಸಿದ ಇತಿಹಾಸವನ್ನು ಎಲ್ಲರಿಗೂ ತಿಳಿಸಲಿ" ಎಂದು ಸವಾಲು ಹಾಕಿದ್ದಾರೆ.
ಈ ಕಿರುಪುಸ್ತಕದ ಒಂದು ಪ್ಯಾರಾದಲ್ಲಿ, "ಭಾರತ ವಿಭಜನೆಯಾಗದೇ ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತಿತ್ತು. ಆದರೆ ಪಂಡಿತ್ ನೆಹರು ಹಾಗೂ ಜಿನ್ನಾ ಅವರ ಅಧಿಕಾರದ ದಾಹದಿಂದಾಗಿ ಮತ್ತು ಬ್ರಿಟಿಷರ ಕುತಂತ್ರದಿಂದಾಗಿ ಈ ಕಸನು ಈಡೇರಲಿಲ್ಲ ಎನ್ನುವುದು ಉಪಾಧ್ಯಾಯ ಅವರ ಸ್ಪಷ್ಟ ಅಭಿಪ್ರಾಯವಾಗಿತ್ತು" ಎಂದು ಬಣ್ಣಿಸಲಾಗಿದೆ.