ದಲಿತರ ಪ್ರತಿಭಟನೆ: ವೀಡಿಯೊ ಚಿತ್ರೀಕರಿಸುತ್ತಿದ್ದ ಪತ್ರಕರ್ತರಿಬ್ಬರನ್ನು ಬಂಧಿಸಿದ ಕೇರಳ ಪೊಲೀಸರು

ಎರ್ನಾಕುಲಂ, ಜ. 24: ದಲಿತರು ನಡೆಸುತ್ತಿದ್ದ ಪ್ರತಿಭಟನೆಯೊಂದನ್ನು ವರದಿ ಮಾಡಲು ತೆರಳಿದ್ದ ಇಬ್ಬರು ಪತ್ರಕರ್ತರನ್ನು ಕೇರಳ ಪೊಲೀಸರು ಬಂಧಿಸಿ ವಿವಾದ ಸೃಷ್ಟಿಸಿದ್ದಾರೆ.
ಈ ಪ್ರತಿಭಟನೆ ಕಳೆದೊಂದು ವರ್ಷದಿಂದ ನಡೆಯುತ್ತಿದ್ದರೂ, ಕಳೆದ ರವಿವಾರ ಪೊಲೀಸರು ಪ್ರತಿಭಟನಕಾರರು ಹಾಕಿದ್ದ ಟೆಂಟ್ ಅನ್ನು ನೆಲಕ್ಕುರುಳಿಸಿದ್ದರಲ್ಲದೆ ಏಳು ಮಂದಿ ಪ್ರತಿಭಟನಕಾರರನ್ನು ಹಾಗೂ ಅಲ್ಲಿದ್ದ ಇಬ್ಬರು ಪತ್ರಕರ್ತರನ್ನೂ ಬಂಧಿಸಿದ್ದಾರೆ.
ಪತ್ರಕರ್ತರಾದ ಅನಂತು ರಾಜಗೋಪಾಲ್ ಹಾಗೂ ಅಭಿಲಾಷ್ ಅವರು ಪ್ರತಿಭಟನೆಯ ವೀಡಿಯೊ ಚಿತ್ರೀಕರಣ ನಡೆಸುತ್ತಿದ್ದರೆನ್ನಲಾಗಿದೆ. ಭಜನಮದಂ ದಲಿತ ಕಾಲನಿಯ ನಿವಾಸಿಗಳು ನಾಯರ್ ಸರ್ವಿಸ್ ಸೊಸೈಟಿಯ ತಾರತಮ್ಯ ನೀತಿಯ ವಿರುದ್ಧ ಕಳೆದ ಒಂದು ವರ್ಷದಿಂದ ಪ್ರತಿಭಟಿಸುತ್ತಿದ್ದಾರೆ. ಸೊಸೈಟಿ ಆಡಳಿತದ ದೇವಳದ ಸಮೀಪವಿರುವ ಸಾರ್ವಜನಿಕ ಮೈದಾನದ ಸುತ್ತ ಗೋಡೆ ಕಟ್ಟಿ ದಲಿತರಿಗೆ ಪ್ರವೇಶ ನಿರಾಕರಿಸಿರುವುದರ ವಿರುದ್ಧ ದಲಿತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬಂಧಿತ ಪತ್ರಕರ್ತ ಅನಂತು ತಾಯಿ ಫೇಸ್ಬುಕ್ ಮುಖಾಂತರ ತಮ್ಮ ಕಷ್ಟ ತೋಡಿಕೊಂಡು ಪೊಲೀಸರು ಮಗನನ್ನು ಭೇಟಿಯಾಗಲು ಅನುಮತಿಸಿಲ್ಲ ಎಂದಿದ್ದರು. ಪತ್ರಕರ್ತರ ಹಾಗೂ ದಲಿತ ಪ್ರತಿಭಟನಕಾರರ ಬಂಧನದ ವಿರುದ್ಧ ಸಾಮಾಜಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ಹರಿದು ಬಂದಿದೆ.
ಭಜನಮದಂ ದಲಿತ ಕಾಲನಿಯಲ್ಲಿ ಸುಮಾರು 160 ಕುಟುಂಬಗಳು ವಾಸಿಸುತ್ತಿವೆ. ಕಳೆದ ವರ್ಷದ ಎಪ್ರಿಲ್ ತಿಂಗಳಲ್ಲಿ ದಲಿತ ಭೂ ಅವಕಾಶ ಸಮರ ಮುನ್ನಾನಿ ಕಾರ್ಯಕರ್ತರು ನಾಯರ್ ಸೊಸೈಟಿ ನಿರ್ಮಿಸಿದ್ದ 400 ಮೀಟರ್ ಉದ್ದದ ಕಂಪೌಂಡ್ ಗೋಡೆಯನ್ನು ಕೆಡವಿದ್ದರು.