ಕೊಲೆಗೆ ಜೈಲಲ್ಲೇ ನಡೆದಿತ್ತು ಒಳಸಂಚು, ಕಲ್ಲಡ್ಕ ಮಿಥುನ್ ಪ್ರಮುಖ ರುವಾರಿ: ಟಿ.ಆರ್. ಸುರೇಶ್
ಬಶೀರ್ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಮಂಗಳೂರು, ಜ. 24: ಕೊಟ್ಟಾರ ಚೌಕಿ ಬಳಿ ಜ. 3ರಂದು ರಾತ್ರಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ನಂತರ ಹತ್ಯೆಗೀಡಾದ ಅಬ್ದುಲ್ ಬಶೀರ್ ಪ್ರಕರಣವು ಹೊಸ ತಿರುವು ಪಡೆದಿದ್ದು, ಕೊಲೆಗೆ ಜೈಲಿನಿಂದಲೇ ಒಳಸಂಚು ಹಾಗೂ ನೆರವು ಲಭಿಸಿರುವ ಮಾಹಿತಿಯನ್ನು ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಬಹಿರಂಗಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಅಬ್ದುಲ್ ಬಶೀರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಿಶನ್ ಪೂಜಾರಿ, ಶ್ರೀಜಿತ, ಧನುಷ ಪೂಡಾರಿ, ಸಂದೇಶ್ ಕೋಟ್ಯಾನ್, ಪುಷ್ಪರಾಜ್ ಮತ್ತು ಲತೇಶ್ ಎಂಬವರನ್ನು ಈಗಾಗಲೇ ದಸ್ತಗಿರಿ ಮಾಡಲಾಗಿದೆ. ಈ ಆರೋಪಿಗಳನ್ನು ಕೂಲಂಕುಷ ತನಿಖೆಗೊಳಪಡಿಸಿದ ವೇಳೆ ಅಬ್ದುಲ್ ಬಶೀರ್ ಕೊಲೆಗೆ ಒಳಸಂಚು ರೂಪಿಸಿ ಆರೋಪಿಗಳಿಗೆ ಜೈಲಿನಿಂದಲೇ ಮಿಥುನ್ ಯಾನೆ ಕಲ್ಲಡ್ಕ ಮಿಥುನ್, ತಿಲಕ್ ರಾಜ್ ಶೆಟ್ಟಿ, ರಾಜು ಯಾನೆ ರಾಜೇಶ್ ಸಹಕಾರ ನೀಡಿದ್ದರೆ, ಅನುಪ್ ಎಂಬಾತನೂ ನೆರವು ನೀಡಿರುವುದು ತಿಳಿದು ಬಂದಿದೆ ಎಂದರು.
ಮಿಥುನ್ ಬಂಟ್ವಾಳ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿದ್ದು, ಈತನ ಮೇಲೆ ಕೊಲೆ ಸೇರಿದಂತೆ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ. ತಿಲಕ್ ರಾಜ್ ಶೆಟ್ಟಿ ನಗರದ ಕಂಕನಾಡಿಯಲ್ಲಿ ಕೊಲೆ ಪ್ರಕರಣದಲ್ಲಿ ದಸ್ತಗಿರಿಯಾಗಿದ್ದಾತ. ರಾಜು ಯಾನೆ ರಾಜೇಶ್ ಕೂಡಾ ಇದೇ ಪ್ರಕರಣದ ಆರೋಪಿ. ಅನುಪ್ ಎಂಬಾತ ಹೊರಗಡೆಯಿಂದಲೇ ಆರೋಪಿಗಳಿಗೆ ನೆರವು ನೀಡಿದ್ದು, ಈತ ಇನ್ನಷ್ಟೆ ಬಂಧನವಾಗಬೇಕಿದೆ ಎಂದು ಅವರು ಹೇಳಿದರು.
ಕಾಟಿಪಳ್ಳದಲ್ಲಿ ದೀಪಕ್ ರಾವ್ ಕೊಲೆಯಾದ ದಿನದಂದೇ ಪ್ರಮುಖ ಆರೋಪಿಗಳು ಮಂಗಳೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ತಿಲಕ್ ರಾಜ್, ಮಿಥುನ್, ನಾರಾಯಣ ಪೂಜಾರಿಯನ್ನು ಭೇಟಿಯಾಗಿ ಆ ಕೊಲೆಗೆ ಪ್ರತೀಕಾರಕ್ಕೆ ನಿರ್ಧರಿಸಿದ್ದರು. ಇದಕ್ಕಾಗಿ ಜೈಲಿನಲ್ಲಿದ್ದ ಮಿಥುನ್ ಹಾಗೂ ಇತರ ಆರೋಪಿಗಳು ಸುರತ್ಕಲ್‌ನಿಂದ ಕೊಟ್ಟಾರ ಚೌಕಿ ವ್ಯಾಪ್ತಿಯೊಳಗಿನ ಯಾರಾದರೂ ಮುಸ್ಲಿಂ ಧರ್ಮದವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಇದಕ್ಕಾಗಿ ಅವರು ಪ್ರಮುಖ ಆರೋಪಿಗಳಿಗೆ ಹೊರಗಡೆಯಿಂದ ಅನುಪ್ ಎಂಬಾತನ ನೆರವು ಕೂಡಾ ಒದಗಿಸಿ, ಅಬ್ದುಲ್ ಬಶೀರ್ ಅವರನ್ನು ಕೊಲೆ ಮಾಡಿರುವುದು ಈವರೆಗಿನ ತನಿಖೆಯಿಂದ ತಿಳಿದು ಬಂದಿದೆ. ಪ್ರಕರಣದ ಕುರಿತು ಇನ್ನಷ್ಟು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.
ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಇತ್ತೀಚೆಗೆ ನಡೆದ ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ, ಅಬ್ದುಲ್ ಬಶೀರ್ ಕೊಲೆ ಪ್ರಕರಣದಲ್ಲಿ ಒಳಸಂಚು ರೂಪಿಸಿರುವ ಕಲ್ಲಡ್ಕ ಮಿಥುನ್‌ನನ್ನು ಬೆಂಗಳೂರು ಜೈಲಿಗೆ, ತಿಲಕ್‌ರಾಜ್‌ನನ್ನು ಬಳ್ಳಾರಿ ಜೈಲಿಗೆ, ರಾಜೇಶ್‌ನನ್ನು ಬೆಳಗಾವಿ ಜೈಲಿಗೆ ವರ್ಗಾವಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಡಿಸಿಪಿಗಳಾದ ಹನುಮಂತ ರಾಯ, ಉಮಾ ಪ್ರಶಾಂತ್ ಉಪಸ್ಥಿತರಿದ್ದರು.

ಮೃತ ಬಶೀರ್







