ಕರ್ನಾಟಕ ಜೊತೆಗೆ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆ ?
ಇಲ್ಲಿವೆ ಕೆಲವು ಕಾರಣಗಳು

ಹೊಸದಿಲ್ಲಿ, ಜ. 24: ಮುಂದಿನ ಲೋಕಸಭಾ ಚುನಾವಣೆ 2019ರ ಎಪ್ರಿಲ್-ಮೇ ತಿಂಗಳಲ್ಲಿ ನಡೆಯಬಹುದೆಂದು ನಿರೀಕ್ಷಿಸಲಾಗಿದ್ದರೂ ಅವಧಿ ಪೂರ್ವ ಚುನಾವಣೆಯ ಸಾಧ್ಯತೆಗಳ ಬಗ್ಗೆಯೂ ಹಲವಾರು ಊಹಾಪೋಹಗಳಿವೆ. ಆದರೆ ಮುಂದಿನ ಕೆಲವೇ ತಿಂಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಜೊತೆಗೆಯೇ ಲೋಕಸಭಾ ಚುನಾವಣೆಯೂ ನಡೆಯಬಹುದೆನ್ನಲಾಗುತ್ತಿದೆ.
ಅದಕ್ಕೆ ಕೆಲವು ಕಾರಣಗಳೂ ಇವೆ
1. ಭವಿಷ್ಯದಲ್ಲಿ ಬಿಜೆಪಿ ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ ಹೇಗೆ ನಿರ್ವಹಿಸಬಹುದೆಂದು ಅಂದಾಜಿಸಿದರೆ 2014ರ ಚುನಾವಣೆಯಲ್ಲಿ ಅದು ದಾಖಲಿಸಿದ 282 ಕ್ಷೇತ್ರಗಳ ವಿಜಯವನ್ನು ಪುನರಾವರ್ತಿಸುವುದು ಈ ಬಾರಿ ಕಷ್ಟವಾಗಬಹುದು.
ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಬಿಜೆಪಿ 40ರಿಂದ 50 ಕ್ಷೇತ್ರಗಳನ್ನು ಕಳೆದುಕೊಳ್ಳಬಹುದೆಂದು ಹಾಗೂ ಉತ್ತರ ಪ್ರದೇಶಗಳಲ್ಲಿ ಹಿಂದಿನ ಬಾರಿಯಂತೆ 71 ಕ್ಷೇತ್ರಗಳಲ್ಲಿ ಜಯ ಸಾಧಿಸುವುದು ಈ ಬಾರಿ ಕಷ್ಟಕರವಾಗಲಿದೆಯೆಂದೇ ಹೇಳಲಾಗುತ್ತಿದೆ.
ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲೂ ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವುದರಿಂದ ಬಿಜೆಪಿ 215ರಿಂದ 225 ಕ್ಷೇತ್ರಗಳಲ್ಲಿ ಮಾತ್ರ ಜಯ ಸಾಧಿಸಬಹುದೆಂದು ನಿರೀಕ್ಷಿಸಲಾಗಿದೆ. ಮೇಲಾಗಿ ಈ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವೈಫಲ್ಯ ಕಂಡಲ್ಲಿ ಅದು ಬರುವ ವರ್ಷ ನಡೆಯಲಿರುವ ಲೋಕಸಭಾ ಚುನಾವಣಾ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಭಯವಿದೆ.
2. ರೈತರು ಎದುರಿಸುತ್ತಿರುವ ಸಮಸ್ಯೆ ಹಾಗೂ ಯುವಜನರಲ್ಲಿ ನಿರುದ್ಯೋಗ ಸಮಸ್ಯೆ ಬಿಜೆಪಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ.
3. ಜಿಎಸ್ಟಿಯಿಂದಾಗಿ, ಬ್ಯಾಂಕ್ ಮರು ಬಂಡವಾಳೀಕರಣ ಹಾಗೂ ತೈಲ ದರಗಳಿಂದಾಗಿ ದೇಶದ ಆರ್ಥಿಕತೆ ಸದ್ಯ ಸುಧಾರಣೆ ಕಾಣುವ ಸಾಧ್ಯತೆ ಕಡಿಮೆಯೆನ್ನಲಾಗಿದೆ.
4. ಅವಧಿಪೂರ್ವ ಚುನಾವಣೆ ಘೋಷಿಸಿ ಆಡಳಿತ ಪಕ್ಷ ವಿಪಕ್ಷಗಳಿಗೆ ಅಚ್ಚರಿ ಮತ್ತು ಆಘಾತ ಕೂಡ ನೀಡಿ ಅವುಗಳಿಗೆ ಸಾಕಷ್ಟು ಪೂರ್ವ ತಯಾರಿಗೆ ಸಮಯಾವಕಾಶ ನೀಡದೇ ಇರಬಹುದು.
5. ಪ್ರಧಾನಿ ಇತ್ತೀಚೆಗೆ ಎರಡು ಸಂದರ್ಶನಗಳನ್ನು ನೀಡಿದ್ದಾರೆ. ಇದು ಅಪರೂಪ. ಏಕೆ ಸಂದರ್ಶನ ನೀಡಿದ್ದಾರೆಂಬ ಪ್ರಶ್ನೆಯೂ ಇದೆ.
6. ರಿಪಬ್ಲಿಕ್ ಟಿವಿ ಸಿ ವೋಟರ್ ಸಮೀಕ್ಷೆ ವಿವರಗಳನ್ನು ಪ್ರಕಟಿಸಿ ಎನ್‌ಡಿಎ 335 ಕ್ಷೇತ್ರಗಳಲ್ಲಿ ಜಯ ಸಾಧಿಸುವುದೆಂದು ಹೇಳಿದೆ.
7. ಪ್ರಧಾನಿಯ ದಾವೋಸ್ ಭೇಟಿಗಂತೂ ಭರ್ಜರಿ ಪ್ರಚಾರ ದೊರೆಯುತ್ತಿದೆ.
8. ಈ ಬಾರಿಯ ಗಣತಂತ್ರ ದಿವಸ ಕಾರ್ಯಕ್ರಮದಲ್ಲಿ ಏಷಿಯಾನ್ ದೇಶಗಳ 10 ನಾಯಕರು ಭಾಗವಹಿಸಲಿದ್ದಾರೆ. ಇದು ಕೂಡ ಮೋದಿ ವರ್ಚಸ್ಸು ಹೆಚ್ಚಿಸಲು ಅನುಕೂಲ.
9. ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಿದರೆ ಹಣವೂ ಉಳಿತಾಯವಾದಂತೆ. ಅಂತೆಯೇ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ, ದಿಲ್ಲಿ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳೊಂದಿಗೆ ಲೋಕಸಭಾ ಚುನಾವಣೆಗಳೂ ನಡೆದರೆ ಅಚ್ಚರಿಯೇನಿಲ್ಲ.