ಕೈದಿಗಳ ಪೋಷಕರಿಂದ 15 ಲಕ್ಷ ರೂ. ವಸೂಲು ಮಾಡಿದ ಸಹ ಕೈದಿಗಳು: ಕಮಿಷನರ್ ಟಿ.ಆರ್. ಸುರೇಶ್
ಹಣಕ್ಕಾಗಿ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಿಗೆ ಹಲ್ಲೆ, ಬೆದರಿಕೆ ಪ್ರಕರಣ

ನಕಲಿ ದಾಖಲೆ ಸೃಷ್ಟಿಸಿ ಕಾರು ವರ್ಗಾವಣೆ!
ಮಂಗಳೂರು, ಜ. 24: ಜಿಲ್ಲಾ ಕಾರಾಗೃಹದಲ್ಲಿ ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿ ನೀಡಿರುವ ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್, ಹಣಕ್ಕಾಗಿ ವಿಚಾರಣಾಧೀನ ಕೈದಿಗಳ ಮೇಲೆ ಹಲ್ಲೆ ನಡೆಸಿ ಬೆದರಿಕೆಯೊಡ್ಡಿ, ಕೈದಿಗಳ ಪೋಷಕರಿಂದ ಸಹ ಕೈದಿಗಳು ಹಣ ವಸೂಲು ಮಾಡಿದ್ದಾರೆ ಎಂದು ವಿವರ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಆರ್‌ಐಡಿಎಲ್ ಸಂಸ್ಥೆಗೆ ವಂಚನೆ ಮಾಡಿದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಸಿಜೋ ಕೆ. ಜೋಸ್, ಸುನಿಲ್ ಹಾಗೂ ಜೆರಿ ಫೌಲ್‌ಗೆ ಹಲ್ಲೆ ನಡೆಸಿರುವ ಸಹ ಕೈದಿಗಳಾದ ಮಿಥುನ್ ಪೂಜಾರಿ, ತಿಲಕ್ ರಾಜ್, ಶಿವರಾಜ್, ರಾಜು ಯಾನೆ ರಾಜೇಶ್, ನಿಖಿಲ್ ಎಂಬವರು ಜೈಲಿನ ಹೊರಗಡೆಯಿಂದ ತಮ್ಮ ಸಹಚರರಿಂದ ವಂಚನೆ ಪ್ರಕರಣದ ಆರೋಪಿಗಳ ಪೋಷಕರಿಂದ 15 ಲಕ್ಷ ರೂ. ವಸೂಲು ಮಾಡಿದ್ದಾರೆ ಎಂದು ತಿಳಿಸಿದರು.
ಸುರತ್ಕಲ್ ಪ್ರಕರಣದಲ್ಲಿ ಸುಮಾರು 55 ಕೋಟಿ ರೂ. ಅವ್ಯವಹಾರ ಮಾಡಿದ್ದೀರಲ್ಲಾ, ನಿಮ್ಮಲ್ಲಿ ಬೇಕಾದಷ್ಟು ಹಣವಿದೆಯಲ್ಲಾ, ನೀವು ಜೀವಂತವಾಗಿ ಬದುಕಿ ಮನೆಗೆ ಹೋಗಬೇಕಾದರೆ ಕೇಳಿದಷ್ಟು ಹಣ ನೀಡಬೇಕು ಎಂದು ವಂಚನೆ ಪ್ರಕರಣದ ಆರೋಪಿಗಳ ಮೇಲೆ ಜೈಲಿನಲ್ಲಿದ್ದ ಈ ಐದು ಮಂದಿ ಹಲ್ಲೆ ನಡೆಸಿ, ಬೆದರಿಕೆ ಒಡ್ಡಿದ್ದರು. ಮಾತ್ರವಲ್ಲದೆ, ಜೈಲಿನ ಹೊರಗಡೆಯಿಂದ ತಮ್ಮ ಸಹಚರರಾದ ಕುಳಾಯಿ ನಿವಾಸಿ ಚರಣ್, ಆಕಾಶಭವನದ ನಿವಾಸಿ ಅನೂಪ್ ಕುಮಾರ್, ಜೋಕಟ್ಟೆ ನಿವಾಸಿ ಮನೋಜ್ ಕುಲಾಲ್ ಯಾನೆ ಕೋಡಿಕೆರೆ ಮನೋಜ್ ಮೂಲಕ ವಂಚನೆ ಆರೋಪಿಗಳ ಪೋಷಕರಿಂದ 15 ಲಕ್ಷ ರೂ. ವಸೂಲು ಮಾಡಿದ್ದರು. ಅದರಲ್ಲಿ ಎರಡು ಲಕ್ಷ ರೂ.ಗಳನ್ನು ಚರಣ್ ಎಂಬಾತನ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು. ತಾವು ವಸೂಲಿ ಮಾಡಿದ ಹಣದಲ್ಲಿ ಚಿನ್ನ ಖರೀದಿಸಿದ್ದಲ್ಲದೆ, ಅಡವಿಟ್ಟಿದ್ದ ಚಿನ್ನವನ್ನು ಬಿಡಿಸಿರುವುದು ಮತ್ತು ಬಡ್ಡಿಗೆ ಹಣ ನೀಡಿರುವುದನ್ನು ಆರೋಪಿಗಳು ಮಾಡಿರುವ ಬಗ್ಗೆ ಈವರೆಗಿನ ತನಿಖೆಯ ವೇಳೆ ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಚರಣ್, ಅನೂಪ್ ಕುಮಾರ್, ಮನೋಜ್ ಕುಲಾಲ್ ಅವರು ಇನ್ನಷ್ಟೇ ದಸ್ತಗಿರಿ ಯಾಗಬೇಕಿದ್ದು, ಪ್ರಕರಣದಲ್ಲಿ ಇನ್ನೂ ಹಲವು ಮಂದಿ ಆರೋಪಿಗಳು ಭಾಗಿಯಾಗಿರುವ ಮಾಹಿತಿ ಇದೆ. ಈ ಬಗ್ಗೆ ಆಳವಾದ ತನಿಖೆ ನಡೆಯುತ್ತಿದೆ ಎಂದು ಕಮಿಷನರ್ ಟಿ.ಆರ್. ಸುರೇಶ್ ತಿಳಿಸಿದರು.
ಈ ಪ್ರಕರಣದಲ್ಲಿ ಆರೋಪಿಗಳು ಹಣ ವಸೂಲು ಮಾಡಿರುವುದು ಮಾತ್ರವಲ್ಲದೆ, ಸುನೀಲ್ ಎಂಬವರಿಗೆ ಸೇರಿದ ಕಾರನ್ನು ಬಲವಂತವಾಗಿ ತಮ್ಮ ಸಹಚರ ಆರೋಪಿ ಅನೂಪ್ ಕಮಾರ್ ಎಂಬಾತನ ಹೆಸರಿಗೆ ದಾಖಲೆಗಳನ್ನು ಸೃಷ್ಟಿಸಿ ವರ್ಗಾವಣೆ ಮಾಡಿದ್ದಾರೆ. ಈ ಕುರಿತು ಪೌಲ್ ಯಾನೆ ಅಪ್ಪಾಜಿಯವರ ದೂರಿನ ಮೇರೆಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಕಮಿಷನರ್ ತಿಳಿಸಿದರು.







