ಹನೂರು: ಜೆಡಿಎಸ್ ಪಕ್ಷದ ಕಚೇರಿಯಲ್ಲಿ ವಿವಿಧ ಗ್ರಾಮಗಳ ಮುಖಂಡರ ಸಭೆ
.jpg)
ಹನೂರು,ಜ.24: ಜಾತ್ಯಾತೀತ ಜನತಾದಳ ಪಕ್ಷ ಮತ್ತು ಕುಮಾರಸ್ವಾಮಿ ಅವರ ತತ್ವ ಸಿದ್ಧಾಂತಗಳನ್ನು ಒಪ್ಪಿ, ಎರಡೂ ರಾಷ್ಟ್ರೀಯ ಪಕ್ಷಗಳ ನಡೆಯಿಂದ ಬೇಸತ್ತು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಲೋಕೇಶ್ ಮೌರ್ಯ ತಿಳಿಸಿದರು.
ಹನೂರು ಪಟ್ಟಣದ ಜಾತ್ಯಾತೀತ ಜನತಾ ದಳ ಪಕ್ಷದ ಕಚೇರಿಯಲ್ಲಿ ವಿವಿಧ ಗ್ರಾಮಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಲೋಕೇಶ್ ಮೌರ್ಯ, ಹನೂರು ಕ್ಷೇತ್ರದ ಜನತೆ ಎರಡು ಕುಟುಂಬ ರಾಜಕಾರಣಗಳಿಂದ ಬೇಸತ್ತಿದ್ದು ಹೊಸ ಮುಖವನ್ನು ಎದುರು ನೋಡುತ್ತಿದ್ದಾರೆ. ಕಳೆದ 3 ವರ್ಷಗಳಿಂದ ಕ್ಷೇತ್ರದಾದ್ಯಂತ ಸುತ್ತಾಟ ನಡೆಸಿದ್ದು ಜನತೆಯ ಬೇಕು ಬೇಡಗಳ ಅರಿವಿದ್ದು ಉತ್ತಮ ಜನಸ್ಪಂದನೆ ದೊರೆಯುತ್ತಿದೆ ಎಂದು ತಿಳಿಸಿದರು.
ಫೆಬ್ರವರಿ 2ನೇ ವಾರದಲ್ಲಿ ಕುಮಾರಣ್ಣ ಹನೂರಿಗೆ: ಕುಮಾರ ಪರ್ವ ಕಾರ್ಯಕ್ರಮಕ್ಕಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಫೆಬ್ರವರಿ 2ನೇ ವಾರದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದು ವಾಸ್ತವ್ಯ ಹೂಡಲಿದ್ದು, ಹನೂರು ಪಟ್ಟಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಚುನಾವಣೆಗೂ ಮುನ್ನ ಹನೂರು ಪಟ್ಟಣದಲ್ಲಿ ಉದ್ಯೋಗ ಮೇಳವನ್ನೂ ಆಯೋಜಿಸುವ ಯೋಚನೆಯಿದೆ. ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಮೇಳ ಆಯೋಜಿಸಲಾಗುವುದು ಎಂದು ತಿಳಿಸಿದರು.
ಕ್ರಿಕೆಟ್ ಪಂದ್ಯಾವಳಿಗೆ ಧನ ಸಹಾಯ: ಇದೇ ವೇಳೆ ಕ್ಷೇತ್ರ ವ್ಯಾಪ್ತಿಯ ಲೊಕ್ಕನಹಳ್ಳಿ ಗ್ರಾಮದ ಯುವಕರು ಭೇಟಿ ಮಾಡಿ ಗ್ರಾಮದಲ್ಲಿ ಹೋಬಳಿ ಮಟ್ಟದ 3 ದಿನಗಳ ಪಂದ್ಯಾವಳಿಯನ್ನು ಏರ್ಪಡಿಸಲು ಉದ್ದೇಶಿಸಲಾಗಿದ್ದು, ಮೌರ್ಯ ಕಪ್ ಎಂದು ಹೆಸರಿಡಲಾಗಿದೆ. ಪಂದ್ಯಾವಳಿಗೆ ಸಹಾಯ ಧನ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕೇಶ್ ಮೌರ್ಯ ಯಾವುದೇ ಕಾರಣಕ್ಕೂ ತಮ್ಮ ಹೆಸರಿನಲ್ಲಿ ಪಂದ್ಯಾವಳಿ ಬೇಡ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೆಸರಿನಲ್ಲಿ ಎಚ್‍ಡಿಕೆ ಕಪ್ ನಡೆಸುವಂತೆ ಸಲಹೆ ನೀಡಿ ಪಂದ್ಯಾವಳಿಗೆ 2 ಲಕ್ಷ ಸಹಾಯ ಧನ ನೀಡುವ ಭರವಸೆ ನೀಡಿದರು.
ಈ ವೇಳೆ ತಿ.ನರಸೀಪುರ ಕ್ಷೇತ್ರದ ಪ್ರಬಲ ಆಕಾಂಕ್ಷಿ ಮಹೇಶ್‍ಕುಮಾರ್ ಮಾತನಾಡಿ, ಕುಮಾರಣ್ಣ ಅವರ ಆಡಳಿತ ವೈಖರಿ ಮತ್ತು ಯುವ ಜನತೆಗಾಗಿ ಅವರು ಈ ಹಿಂದೆ ನೀಡಿರುವ ಯೋಜನೆಗಳು ಮತ್ತು ಮುಂದಿನ ದಿನಗಳಲ್ಲಿ ನೀಡುವ ಯೋಜನೆಗಳ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಹಲವಾರು ಯೋಜನೆಗಳನ್ನು ನೀಡಲಿದ್ದಾರೆ. ಈ ಎಲ್ಲವನ್ನು ಮನಗಂಡು ಯುವಸಮೂಹ ಜೆಡಿಎಸ್ ಪಕ್ಷದ ಪರವಾಗಿ ದುಡಿದು ಕ್ಷೇತ್ರವನ್ನು ಅಭಿವೃದ್ಧಿಯ್ಯತ್ತ ಕೊಂಡೊಯ್ಯಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಿ.ಜಿ.ಪಾಳ್ಯ ಗ್ರಾ.ಪಂ ಸದಸ್ಯ ಕೃಷ್ಣಮೂರ್ತಿ, ತಾ.ಪಂ ಮಾಜಿ ಸದಸ್ಯ ಸಣ್ಣೇಗೌಡ, ಮತ್ತು ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮುಖಂಡರುಗಳು ಹಾಜರಿದ್ದರು.