ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಪ್ರತಿಮೆಗೆ ಕೇಸರಿ ಬಣ್ಣ ಬಳಿದ ಸಂಘ ಪರಿವಾರದ ಕಾರ್ಯಕರ್ತರು

ಕರ್ಪೂರಿ ಠಾಕೂರ್
ಪಟ್ನಾ, ಜ.24: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭೇಟಿಯಿಂದ ಉತ್ತೇಜಿತರಾಗಿರುವ ಸಂಘ ಪರಿವಾರದ ಕಾರ್ಯಕರ್ತರು ಬಿಹಾರದ ದರ್ಬಂಗಾ ಜಿಲ್ಲೆಯಲ್ಲಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಅವರ ಪ್ರತಿಮೆಗೆ ಕೇಸರಿ ಬಣ್ಣ ಬಳಿದ ಘಟನೆ ವರದಿಯಾಗಿದೆ.ಬಿಜೆಪಿಯ ಕೆಲವು ಕಾರ್ಯಕರ್ತರು ಸೇರಿದಂತೆ ಆರೆಸ್ಸೆಸ್ನ ಕಾರ್ಯಕರ್ತರು ಮಂಗಳವಾರದಂದು ಕರ್ಪೂರಿ ಠಾಕೂರ್ ಪ್ರತಿಮೆಗೆ ಕೇಸರಿ ಬಣ್ಣ ಬಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಘ ಪರಿವಾರದ ಕಾರ್ಯಕರ್ತರು ಮೋಹನ್ ಭಾಗವತ್ ಅವರ ಆಗಮನಕ್ಕೂ ಮುನ್ನ ಇಡೀ ನಗರವನ್ನು ಕೇಸರಿಮಯವಾಗಿ ಬದಲಾಯಿಸಿದ್ದಾರೆ. ನಗರದ ಎಲ್ಲೆಡೆಯಲ್ಲೂ ಕೇಸರಿ ಧ್ವಜಗಳು, ಬ್ಯಾನರ್ಗಳು, ಪೋಸ್ಟರ್ಗಳು, ಸ್ವಾಗತ ಕಮಾನುಗಳೇ ಕಾಣುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಘ ಪರಿವಾರದ ಈ ನಡೆಯನ್ನು ರಾಷ್ಟ್ರೀಯ ಜನತಾ ದಳ ತೀವ್ರವಾಗಿ ಖಂಡಿಸಿದೆ. ಪಕ್ಷದ ನೂರಾರು ಕಾರ್ಯಕರ್ತರು ಠಾಕೂರ್ ಅವರ ಪ್ರತಿಮೆಯ ಕೇಸರೀಕರಣದ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿದರು ಮತ್ತು ಈ ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಮನವಿ ಸಲ್ಲಿಸಿದರು.