ಅಮರನಾಥ ಯಾತ್ರಾರ್ಥಿಗಳ ಪ್ರಾಣ ರಕ್ಷಿಸಿದ್ದ ಚಾಲಕ ಗಫೂರ್‌ಗೆ ಸರ್ವೋತ್ತಮ ಜೀವನ ರಕ್ಷ ಪದಕ ಪುರಸ್ಕಾರ

ಹೊಸದಿಲ್ಲಿ, ಜ.24: ಭಯೋತ್ಪಾದಕರ ಗುಂಡಿನ ಸುರಿಮಳೆಯ ಮಧ್ಯೆಯೂ ಸುರಕ್ಷಿತವಾಗಿ ಬಸ್ಸನ್ನು ಚಲಾಯಿಸಿಕೊಂಡು 52 ಅಮರನಾಥ ಯಾತ್ರಾರ್ಥಿಗಳ ಪ್ರಾಣ ರಕ್ಷಿಸಿದ ಗುಜರಾತ್‌ನ ಬಸ್ ಚಾಲಕ ಶೇಖ್ ಸಲೀಮ್ ಗಫೂರ್‌ಗೆ , ನಾಗರಿಕರಿಗೆ ಶೌರ್ಯ ಪ್ರದರ್ಶನಕ್ಕೆ ನೀಡಲಾಗುವ ಅತ್ಯುನ್ನತ ಪುರಸ್ಕಾರ ‘ಸರ್ವೋತ್ತಮ ಜೀವನ ರಕ್ಷ ಪದಕ’ ಘೋಷಿಸಲಾಗಿದೆ. ಜತೆಗೆ ಅವರಿಗೆ 1 ಲಕ್ಷ ನಗದು ಪುರಸ್ಕಾರವನ್ನೂ ಗಣರಾಜ್ಯೋತ್ಸವ ಆಚರಣೆಯಂದು ಪ್ರದಾನ ಮಾಡಲಾಗುವುದು ಎಂದು ಗೃಹ ಸಚಿವಾಲಯ ಘೋಷಿಸಿದೆ.
2017ರ ಜುಲೈ 10ರಂದು ಅಮರನಾಥ ಯಾತ್ರಾರ್ಥಿಗಳ ತಂಡವಿದ್ದ ಬಸ್ಸನ್ನು ಜಮ್ಮು-ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಬಟೆಂಗೂ ಎಂಬಲ್ಲಿ ತಡೆದಿದ್ದ ಭಯೋತ್ಪಾದಕರು ಬಸ್ಸಿನ ಮೇಲೆ ಗುಂಡಿನ ದಾಳಿ ನಡೆಸಿ 14 ಮಂದಿಯನ್ನು ಕೊಂದಿದ್ದರು ಹಾಗೂ ಹಲವು ಯಾತ್ರಾರ್ಥಿಗಳು ಗಾಯಗೊಂಡಿದ್ದರು. ಆದರೆ ಸಮಯಪ್ರಜ್ಞೆ ಹಾಗೂ ಸಾಹಸ ಮೆರೆದಿದ್ದ ಚಾಲಕ ಗಫೂರ್, ಗುಂಡಿನ ದಾಳಿಯ ನಡುವೆಯೂ ಬಸ್ಸನ್ನು ಸುರಕ್ಷಿತ ಸ್ಥಳಕ್ಕೆ ಚಲಾಯಿಸಿಕೊಂಡು ಹೋಗಿ 52 ಯಾತ್ರಾರ್ಥಿಗಳ ಪ್ರಾಣ ರಕ್ಷಿಸಿದ್ದರು ಎಂದು ಗೃಹ ಇಲಾಖೆ ತಿಳಿಸಿದೆ.
ಈ ವರ್ಷ 107 ಪೊಲೀಸರಿಗೆ ಶೌರ್ಯ ಪದಕ ನೀಡಲಾಗುತ್ತಿದ್ದು ಇದರಲ್ಲಿ ಜಮ್ಮು- ಕಾಶ್ಮೀರದ 38, ಸಿಆರ್‌ಪಿಎಫ್‌ನ 35, ಛತ್ತೀಸ್‌ಗಢದ 10, ಮಹಾರಾಷ್ಟ್ರದ 7, ತೆಲಂಗಾಣದ 6 ಹಾಗೂ ಇತರ ರಾಜ್ಯಗಳ ಪೊಲೀಸರು ಸೇರಿದ್ದಾರೆ . ಇವರಲ್ಲಿ ಐವರು ಐಪಿಎಸ್ ಅಧಿಕಾರಿಗಳು ಸೇರಿದ್ದಾರೆ . 7 ಪೊಲೀಸರಿಗೆ(ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ಸಂದರ್ಭ ಹುತಾತ್ಮರಾದ ಪೊಲೀಸರು) ಮರಣೋತ್ತರ ಪದಕ ಪುರಸ್ಕಾರ ಘೋಷಿಸಲಾಗಿದೆ.
2016ರ ಜೂನ್ 3ರಂದು ಬಿಎಸ್‌ಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್ಸಿನ ಮೇಲೆ ಭಯೋತ್ಪಾದಕರು ದಾಳಿ ನಡೆಸಿದಾಗ ಅಪ್ರತಿಮ ಶೌರ್ಯ ಪ್ರದರ್ಶಿಸಿ ಪ್ರತಿ ದಾಳಿ ಸಂಘಟಿಸಿದ ಸಿಆರ್‌ಪಿಎಫ್‌ನ ಅಧಿಕಾರಿ ನಂದಕಿಶೋರ್ ಪ್ರಸಾದ್‌ಗೆ ಪೊಲೀಸ್ ಶೌರ್ಯ ಪದಕ ಘೋಷಿಸಲಾಗಿದೆ. ಈ ವರ್ಷ 785 ಪೊಲೀಸ್ ಪದಕ ಘೋಷಿಸಲಾಗಿದ್ದು ಇದರಲ್ಲಿ 616 ಪೊಲೀಸ್ ಪದಕಗಳನ್ನು ಅಸಾಧಾರಣ ಸೇವೆ ಸಲ್ಲಿಸಿದವರಿಗೆ ಘೋಷಿಸಲಾಗಿದೆ.