ಛತ್ತೀಸ್‌ಗಡ: ಮಾವೋವಾದಿಗಳೊಂದಿಗೆ ಗುಂಡಿನ ಕಾಳಗ, ನಾಲ್ವರು ಪೊಲೀಸರು ಬಲಿ

ನಾರಾಯಣಪುರ,ಜ.24: ಛತ್ತೀಸಗಡದ ನಾರಾಯಣಪುರ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಮಾವೋವಾದಿಗಳೊಂದಿಗಿನ ಭೀಷಣ ಗುಂಡಿನ ಕಾಳಗದಲ್ಲಿ ಇಬ್ಬರು ಸಬ್-ಇನ್ಸ್‌ಪೆಕ್ಟರ್‌ಗಳು ಮತ್ತು ಇಬ್ಬರು ಕಾನ್‌ಸ್ಟೇಬಲ್‌ಗಳು ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಮೃತರು ನಕ್ಸಲರ ವಿರುದ್ಧ ಹೋರಾಟಕ್ಕೆಂದೇ ರೂಪಿಸಲಾದ ಜಿಲ್ಲಾ ಮೀಸಲು ದಳ(ಡಿಆರ್‌ಜಿ)ಗೆ ಸೇರಿದವರಾಗಿದ್ದಾರೆ.
ಇರ್ಪಾನರ್ ಪೊಲೀಸ್ ಠಾಣಾ ವ್ಯಾಪ್ತಿಯ ದಟ್ಟಾರಣ್ಯದಿಂದ ಕೂಡಿದ ಗುಡ್ಡಗಾಡು ಪ್ರದೇಶ ಅಭುಜಮಾದ್ ಎಂಬಲ್ಲಿ ಈ ಘಟನೆ ನಡೆದಿದೆ. ಡಿಆರ್‌ಜಿ ತಂಡ ಒರ್ಛಾ ಗ್ರಾಮದಿಂದ ಕಾರ್ಯಾಚರಣೆಗೆಂದು ತೆರಳುತ್ತಿದ್ದಾಗ ದುರ್ಗಮ ಪ್ರದೇಶದಲ್ಲಿ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಗುಂಡಿನ ಕಾಳಗ ಆರಂಭಗೊಂಡಿತ್ತು. ಸುಮಾರು ಒಂದು ಗಂಟೆ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲರಿಗೂ ಸಾವುನೋವು ಉಂಟಾಗಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಏಳು ಪೊಲೀಸರು ಗಾಯಗೊಂಡಿದ್ದು, ಅವರನ್ನು ಹೆಲಿಕಾಪ್ಟರ್ ಮೂಲಕ ರಾಯಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತನ್ಮಧ್ಯೆ ಬಿಜಾಪುರ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಸಾಧನವೊಂದು ಸ್ಫೋಟಿಸಿದ ಪರಿಣಾಮ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.