ರೈತರ ಅಲೆದಾಟ ತಪ್ಪಿಸಲು ಪೋಡಿ ಮುಕ್ತ ಯೋಜನೆ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು, ಜ.24: ರೈತರು ಪಹಣಿಯಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳುವುದಕ್ಕಾಗಿ ಕಂದಾಯ ಇಲಾಖೆಯ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಪೋಡಿ ಮುಕ್ತ ಗ್ರಾಮ ಯೋಜನೆ ಜಾರಿಗೆ ತರಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಬುಧವಾರ ನಗರದ ಕೆ.ಜಿ.ರಸ್ತೆಯ ಕಂದಾಯ ಭವನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಕಂದಾಯ ಇಲಾಖಾ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಆಯೋಜಿಸಿದ್ದ, 2018ನೆ ಸಾಲಿನ ಕಂದಾಯ ಇಲಾಖಾ ನೌಕರರ ಕಾರ್ಯಾಗಾರ ಹಾಗೂ ದಿನಚರಿ-ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಪ್ರತಿ ಗ್ರಾಮವನ್ನು ಪೋಡಿ ಮುಕ್ತ ಗ್ರಾಮವನ್ನಾಗಿಸಲು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೆ ಕೆಲವು ತಾಲೂಕುಗಳು ಪೋಡಿ ಮುಕ್ತ ತಾಲೂಕಾಗಿ ಪರಿಗಣಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಶುಲ್ಕವಿಲ್ಲದೇ ಪೋಡಿ ಮಾಡಿಕೊಳ್ಳಬಹುದಾಗಿದೆ. ನಾನು ಉಸ್ತುವಾರಿ ಸಚಿವನಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಗ್ರಾಮವೊಂದು ಪೋಡಿ ಮುಕ್ತವಾಗಿದೆ ಎಂದು ಅವರು ತಿಳಿಸಿದರು.
ಸರಕಾರದ ಎಲ್ಲ ಇಲಾಖೆಗಳಿಗಿಂತ ಕಂದಾಯ ಇಲಾಖೆಗೆ ಮಹತ್ವ ಹೆಚ್ಚಾಗಿದ್ದು, ಸರಕಾರ ಹಕ್ಕುಪತ್ರ ನೀಡಿ ಸಾವಿರಾರು ಬಡಕುಟುಂಬಗಳಿಗೆ ಆಶ್ರಯ ನೀಡಿದೆ. ಕಂದಾಯ ಇಲಾಖೆಗೆ ಹೆಚ್ಚಾಗಿ ಹಳ್ಳಿ ಜನರು, ಅನಕ್ಷರಸ್ಥರು ಬರುತ್ತಾರೆ. ಅವರೊಂದಿಗೆ ಸೌಜನ್ಯದಿಂದ ವರ್ತಿಸಿ ಜನಮನ್ನಣೆ ಗಳಿಸಲು ಕಂದಾಯ ಇಲಾಖೆ ಸಿಬ್ಬಂದಿ ಮುಂದಾಗಬೇಕು ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಾಲಯ್ಯ, ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಎಂ.ವಿಜಯಕುಮಾರ್, ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಾಲತೇಶ್ ವೈ.ಅಣ್ಣೀಗರಿ, ಕೃಷ್ಣಮೂರ್ತಿ, ಹರೀಶ್, ನಂದೀಶ್, ರಾಜಶೇಖರ್ ಸೇರಿ ಪ್ರಮುಖರಿದ್ದರು.







