2017ರಲ್ಲಿ ದಾಖಲೆ ಸೃಷ್ಟಿಸಿದ ದೇಶಿಯ ವಿಮಾನಗಳ ಪ್ರಯಾಣಿಕರ ಸಂಖ್ಯೆ

ಹೊಸದಿಲ್ಲಿ,ಜ.24: 2017ರಲ್ಲಿ ಭಾರತದ ದೇಶಿಯ ವಿಮಾನಗಳಲ್ಲಿ 11.71 ಕೋಟಿ ಜನರು ಪ್ರಯಾಣಿಸುವ ಮೂಲಕ ಹೊಸ ದಾಖಲೆಯು ಸೃಷ್ಟಿಯಾಗಿದೆ. ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.17.31ರಷ್ಟು ಏರಿಕೆಯಾಗಿದೆ. ಕಡಿಮೆ ವಿಮಾನ ಇಂಧನ ಬೆಲೆ, ಜನರ ಹೆಚ್ಚುತ್ತಿರುವ ಆದಾಯ, ವಿಮಾನಗಳ ಸಾಮರ್ಥ್ಯ ಹೆಚ್ಚಳ ಮತ್ತು ಉಡಾನ್ ಯೋಜನೆಯಡಿ ಹೊಸ ತಾಣಗಳಿಗೆ ಯಾನಗಳ ಆರಂಭ ಇವು ಈ ದಾಖಲೆ ಬೆಳವಣಿಗೆಗೆ ಕಾರಣವಾಗಿವೆ.
ದೇಶಿಯ ವಿಮಾನಯಾನ ಸಂಸ್ಥೆಗಳು ಕ್ಯಾಲೆಂಡರ್ ವರ್ಷವೊಂದರಲ್ಲಿ 10 ಕೋಟಿಗೂ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸಿರುವುದು ಇದೇ ಪ್ರಥಮವಾಗಿದೆ.
ದೇಶಿಯ ವಿಮಾನಯಾನ ಸಂಸ್ಥೆಗಳಿಗೆ 2010ರಲ್ಲಷ್ಟೇ ಐದು ಕೋಟಿ ಪ್ರಯಾಣಿಕರ ಗಡಿಯನ್ನು ದಾಟಲು ಸಾಧ್ಯವಾಗಿತ್ತು. ಅಲ್ಲಿಂದೀಚೆಗೆ ಏಳು ವರ್ಷಗಳಲ್ಲಿ ಇನ್ನೂ ಐದು ಕೋಟಿಗೂ ಅಧಿಕ ಪ್ರಯಾಣಿಕರನ್ನು ಅವು ಸೇರಿಸಿಕೊಂಡಿವೆ.
2017ರಲ್ಲಿ ದೇಶಿಯ ಸಂಸ್ಥೆಗಳ ವಿಮಾನಗಳಲ್ಲಿ 11.71 ಕೋ.ಜನರು ಪ್ರಯಾಣಿಸಿದ್ದು, 2016ರಲ್ಲಿ ಈ ಸಂಖ್ಯೆ 9.98 ಕೋ.ಆಗಿತ್ತು ಎಂದು ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯವು ತಿಳಿಸಿದೆ.
ಕಳೆದ ಡಿಸೆಂಬರ್ ತಿಂಗಳೊಂದರಲ್ಲೇ ಭಾರತೀಯ ವಿಮಾನಯಾನ ಸಂಸ್ಥೆಗಳು 1.12 ಕೋ.ಪ್ರಯಾಣಿಕರನ್ನು ಹೊತ್ತೊಯ್ದಿದ್ದು, ಇದು ಭಾರತೀಯ ವೈಮಾನಿಕ ಇತಿಹಾಸದಲ್ಲಿ ಅತ್ಯಧಿಕ ಮಾಸಿಕ ಸಂಖ್ಯೆಯಾಗಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಈ ಸಂಖ್ಯೆ 95.52 ಲಕ್ಷ ಆಗಿತ್ತು. ದೇಶಿಯ ವಿಮಾನಯಾನ ಸಂಸ್ಥೆಗಳು ಕಳೆದ ವರ್ಷದ ಮೇ, ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಒಂದು ಕೋಟಿಗೂ ಅಧಿಕ ಪ್ರಯಾಣಿಕರನ್ನು ಸಾಗಿಸಿವೆ.
463.72 ಲಕ್ಷ(ಶೇ.39.6) ಪ್ರಯಾಣಿಕರನ್ನು ಸಾಗಿಸುವ ಮೂಲಕ ಇಂಡಿಗೋ ತನ್ನ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. ನಂತರದ ಸ್ಥಾನಗಳು ಜೆಟ್ ಏರ್‌ವೇಸ್ (207.63 ಲ.), ಏರ್ ಇಂಡಿಯಾ(155.81 ಲ.) ಮತ್ತು ಸ್ಪೈಸ್ ಜೆಟ್(154.32 ಲ.) ಪಾಲಾಗಿವೆ.