ಕೃಷಿಗೆ ಹಗಲಿನಲ್ಲೂ ವಿದ್ಯುತ್ ಸರಬರಾಜಿಗೆ ಚಿಂತನೆ: ಡಿ.ಕೆ.ಶಿವಕುಮಾರ್

ಬೆಂಗಳೂರು, ಜ.24: ರಾಜ್ಯದ ಎಲ್ಲ ಭಾಗದಲ್ಲೂ ಕೃಷಿ ಭೂಮಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಗಲು ಹೊತ್ತಿನಲ್ಲೂ ವಿದ್ಯುತ್ ಸರಬರಾಜು ಮಾಡಲು ಎಲ್ಲಾ ರೀತಿಯ ತಯಾರಿ ನಡೆಸಲಾಗುತ್ತಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬುಧವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರತಿ ತಾಲೂಕಿನಲ್ಲೂ 25 ಮೆ.ವ್ಯಾ ಸಾಮರ್ಥ್ಯದ ಸೌರ ಸ್ಥಾವರಗಳ ಮೂಲಕ ವಿದ್ಯುತ್ ಉತ್ಪಾದಿಸಿ, ಅಲ್ಲಿಯೇ ಸರಬರಾಜು ಮಾಡಲು ತಯಾರಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕರಾವಳಿ, ಮಲೆನಾಡು ಹಾಗೂ ನೀರಾವರಿ ಪ್ರದೇಶದಲ್ಲಿ ದಿನಪೂರ್ತಿ ವಿದ್ಯುತ್ ಸರಬರಾಜಿಗೆ ರೈತರು ಒತ್ತಾಯಿಸುತ್ತಿದ್ದಾರೆ. ಬಯಲು ಸೀಮೆ ಪ್ರದೇಶದಲ್ಲಿ ದಿನಪೂರ್ತಿ ವಿದ್ಯುತ್ ಸರಬರಾಜಿಗೆ ಬೇಡಿಕೆ ಬಂದಿಲ್ಲ. ಆದರೂ ರಾಜ್ಯದಲ್ಲಿ ಎಲ್ಲ ಪ್ರದೇಶಗಳಲ್ಲೂ ಸಮಾನ ರೀತಿಯ ವಿದ್ಯುತ್ ಕೊಡುವುದು ಸರಕಾರದ ಆಶಯವಾಗಿದೆ ಎಂದು ಅವರು ಹೇಳಿದರು.
ವಿದ್ಯುತ್ ಕೊಡಲು ಎನ್‌ಟಿಪಿಸಿ ಹಿಂದೇಟು: ಪಾವಗಡದ ಸೋಲಾರ್ ಪವರ್ ಪಾರ್ಕ್‌ನಿಂದ 3ರೂ.ದರದಲ್ಲಿ ವಿದ್ಯುತ್ ನೀಡಲು ಎನ್‌ಟಿಪಿಸಿ ಒಪ್ಪಿಗೆ ನೀಡಿತ್ತು. ಆದರೆ, 3 ರೂ.ದರದಲ್ಲಿ ವಿದ್ಯುತ್ ನೀಡಲು ಸಾಧ್ಯವಿಲ್ಲವೆಂದು ಒಪ್ಪಂದದಿಂದ ಹಿಂದೆ ಸರಿದಿದೆ. ಹೀಗಾಗಿ ಇಂಧನ ಇಲಾಖೆಯಿಂದಲೇ ನೇರವಾಗಿ ಟೆಂಡರ್ ಕರೆಯಲಾಗುವುದು ಎಂದು ಅವರು ಹೇಳಿದರು.
ರಾಜ್ಯದಲ್ಲಿ 61ಕೋ ಜನರೇಶನ್ ಕಾರ್ಖಾನೆಗಳಿವೆ. ಈ ಕಾರ್ಖಾನೆಗಳಿಂದ 1515 ಮೆವ್ಯಾ ವಿದ್ಯುತ್ ಉತ್ಪಾದನೆ ಸಾಮರ್ಥ್ಯವಿದೆ. ಆದರೆ, ಕೇವಲ 516 ಮೆವ್ಯಾ ಮಾತ್ರ ಸರಬರಾಜು ಮಾಡುತ್ತಿದ್ದಾರೆ. ಕಬ್ಬು ಅರೆಯುವ ಅವಧಿ ಮುಗಿಯುತ್ತಿರುವ ಕಾರಣ ವಿದ್ಯುತ್ ಉತ್ಪಾದನೆ ಕುಂಠಿತವಾಗುತ್ತಿದೆ ಎಂದು ಅವರು ತಿಳಿಸಿದರು.
ರಾಜಕೀಯ ಒಳ ಒಪ್ಪಂದ ಎಂದೂ ಮಾಡಿಲ್ಲ:
ನನ್ನ ರಾಜಕೀಯ ಜೀವನದಲ್ಲಿ ರಾಜಕೀಯ ಒಳ ಒಪ್ಪಂದವನ್ನು ಹಿಂದೆಯೂ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ನಾನು ರಾಜಕೀಯದಲ್ಲಿ ನೇರವಾಗಿ ಹೋರಾಟ ಮಾಡುತ್ತಾ ಬಂದವನು. ಹಿಂದೆ ಒಂದು ರೀತಿಯಲ್ಲಿ, ಮುಂದೆ ಮತ್ತೊಂದು ರೀತಿಯಲ್ಲಿ ವರ್ತಿಸುವ ಪ್ರಶ್ನೆಯೆ ಇಲ್ಲ. ಚನ್ನಪಟ್ಟಣದಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನೊಂದಿಗೆ ಒಳ ಒಪ್ಪಂದವಾಗಿದೆ ಎಂಬ ಮಾತು ಸತ್ಯಕ್ಕೆ ದೂರವಾದದ್ದು ಎಂದು ತಿಳಿಸಿದರು.ನಮ್ಮ ಕುಟುಂಬದಿಂದ ನನ್ನನ್ನು ಹೊರತು ಪಡಿಸಿ ಯಾರೂ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನನ್ನ ಸಹೋದರಿಯ ಪತಿ ಶರತ್‌ಚಂದ್ರ ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ. ಅಭ್ಯರ್ಥಿ ಯಾರಾಗಬೇಕೆಂದು ಹೈಕಮಾಂಡ್ ನಿರ್ಧರಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.







