ಸಂವಿಧಾನದ ಆಶಯ ಉಳಿಸಲು ಪ್ರಾಮಾಣಿಕ ಪ್ರಯತ್ನ ಅಗತ್ಯ: ಹರೀಶ್ ಬಂಗೇರಾ
ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ವಿಚಾರ ಸಂಕಿರಣ
ಮಂಗಳೂರು, ಜ.24: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರ ಆಶಯದಂತೆ ಕೇಂದ್ರದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರ ನಡೆಸಿದ್ದರೆ ಹಾಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕಾರ್ಯಾಚರಿಸುತ್ತಿದೆ. ಈ ಬಗ್ಗೆ ಸಮಾನ ಮನಸ್ಕ ಸಂಘಟನೆಗಳು ಒಗ್ಗೂಡಿ ಹೋರಾಡಬೇಕಿದೆಯಲ್ಲದೆ, ಸಂವಿಧಾನದ ಆಶಯ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಬಂಗೇರಾ ಹೇಳಿದ್ದಾರೆ.
ದ.ಕ.ಜಿಲ್ಲಾ ಅಹಿಂದ ಜನಚಳವಳಿ ವತಿಯಿಂದ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಬುಧವಾರ ನಗರದಲ್ಲಿ ನಡೆದ ‘ಉನ್ನತ ನ್ಯಾಯಾಂಗ ಮತ್ತು ಸಂವಿಧಾನದ ಆಶಯ’ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ನಾಡಿನಲ್ಲಿ ಸ್ವಾತಂತ್ರ ದಿನಾಚರಣೆಯನ್ನು ಮಾತ್ರ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಆದರೆ, ಗಣರಾಜ್ಯೋತ್ಸವ ಕೂಡ ಅಷ್ಟೇ ಮಹತ್ವದ್ದಾಗಿದೆ. ಅದನ್ನು ನಿರ್ಲಕ್ಷಿಸುವುದು ಸರಿಯಲ್ಲ. ಗಣರಾಜ್ಯ ದಿನಾಚರಣೆಯ ಮಹತ್ವ, ಉದ್ದೇಶದ ಬಗ್ಗೆ ಯುವ ಪೀಳಿಗೆಗೆ ತಿಳಿಸಿಕೊಡುವ ಅಗತ್ಯವಿದೆ ಎಂದು ಹರೀಶ್ ಕುಮಾರ್ ಬಂಗೇರಾ ಅಭಿಪ್ರಾಯಪಟ್ಟರು.
ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಕಾರ್ಯಕ್ರಮ ಉದ್ಘಾಟಿಸಿದರು. ಅಹಿಂದ ಜನಚಳವಳಿಯ ಅಧ್ಯಕ್ಷ ವಾಸುದೇವ ಬೋಳೂರು ಅಧ್ಯಕ್ಷತೆ ವಹಿಸಿದ್ದರು.ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಾಹಿತಿ ಪೇರೂರು ಜಾರು, ಕರ್ನಾಟಕ ಮುಸ್ಲಿಂ ವಿಕಾಸ ಪರಿಷತ್ ಅಧ್ಯಕ್ಷ ಹಾಜಿ ಹಮೀದ್ ಕಂದಕ್ ಮಾತನಾಡಿದರು. ಅಹಿಂದ ಜನಚಳವಳಿಯ ಕಾರ್ಯಾಧ್ಯಕ್ಷ ಪದ್ಮನಾಭ ನರಿಂಗಾನ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಯೂಸುಫ್ ವಕ್ತಾರ್ ಸ್ವಾಗತಿಸಿದರು.
ಸಂವಿಧಾನದ ಆಶಯವನ್ನು ಉಳಿಸುವಲ್ಲಿ ಜನಜಾಗೃತಿ ಮೂಡಿಸುವ ಸಲುವಾಗಿ ರಾಜಕೀಯ ಪಕ್ಷದ ಮುಖಂಡರಾದ ಹರೀಶ್ ಕುಮಾರ್ ಬಂಗೇರಾ ಮತ್ತು ಮುನೀರ್ ಕಾಟಿಪಳ್ಳ ಅವರಿಗೆ ಸಂವಿಧಾನದ ಪ್ರತಿಯನ್ನು ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು.







