ನಾಳೆ ಬಿಗಿಭದ್ರತೆಯ ನಡುವೆ 3,000 ಥಿಯೇಟರ್‌ಗಳಲ್ಲಿ ‘ಪದ್ಮಾವತ್’ ಬಿಡುಗಡೆ

ಮುಂಬೈ,ಜ.24: ಕಳೆದೊಂದು ವರ್ಷದಿಂದ ವಿವಾದಗಳ ಸುಳಿಯಲ್ಲಿ ಸಿಲುಕಿದ್ದ ಬಾಲಿವುಡ್ ಚಿತ್ರ ‘ಪದ್ಮಾವತ್ ಗುರುವಾರ ಬಿಗುಭದ್ರತೆಯ ನಡುವೆ ಬಿಡುಗಡೆ ಯಾಗಲಿದೆ.
ಮಹಾರಾಷ್ಟ್ರದ 475 ಥಿಯೇಟರ್‌ಗಳು ಸೇರಿದಂತೆ ದೇಶಾದ್ಯಂತ 3,000 ಥಿಯೇಟರ್‌ಗಳಲ್ಲಿ ಚಿತ್ರವು ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಸಿನೆಮಾ ಓನರ್ಸ್ ಆ್ಯಂಡ್ ಎಕ್ಸಿಬಿಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ನಿತಿನ್ ದಾತಾರ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಚಿತ್ರವು 2ಡಿ,3ಡಿ ಮತ್ತು ಐಮ್ಯಾಕ್ಸ್ 3ಡಿ ರೂಪಗಳಲ್ಲಿ ತೆರೆಯ ಮೇಲೆ ಮೂಡಲಿದೆ.
ರಾಜ್ಯಾದ್ಯಂತ ಥಿಯೇಟರ್‌ಗಳಿಗೆ ಭದ್ರತೆಯನ್ನು ಒದಗಿಸುವಂತೆ ಗೃಹಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಆದೇಶಿಸಿದ್ದಾರೆ ಎಂದು ದಾತಾರ್ ತಿಳಿಸಿದರು.
ಸಂಬಂಧಿತ ಬೆಳವಣಿಗೆಯೊಂದರಲ್ಲಿ ಬಲಪಂಥೀಯ ಸಂಘಟನೆ ಹಿಂದು ಜನಜಾಗ್ರತಿ ಸಮಿತಿಯು ಚಿತ್ರದ ನಿರ್ಮಾಪಕರು ಸರಕಾರಕ್ಕೆ ಹಣಪಾವತಿ ಬಾಕಿಯುಳಿಸಿಕೊಂಡಿರುವ ವಿಷಯವನ್ನೆತ್ತಿದ್ದಾರೆ. ಕೊಲ್ಲಾಪುರ ಸಮೀಪದ ಮ್ಹಾಸಾಯಿಯಲ್ಲಿ 20 ದಿನಗಳ ಚಿತ್ರೀಕರಣಕ್ಕಾಗಿ ನಿರ್ಮಾಪಕರು ಸರಕಾರಕ್ಕೆ 1.91 ಲ.ರೂ.ಶುಲ್ಕವನ್ನು ಪಾವತಿಸಬೇಕಿತ್ತು. ಆದರೆ ಅವರು ಕೇವಲ 28,716 ರೂ.ಗಳನ್ನು ಪಾವತಿಸಿದ್ದಾರೆ ಎಂದು ಸಮಿತಿಯ ನರೇಂದ್ರ ಸುರ್ವೆ ಆರೋಪಿಸಿದ್ದಾರೆ.