ಮುಸ್ಲಿಂ ಕುಟುಂಬಕ್ಕೆ ಪಾಕಿಸ್ತಾನಕ್ಕೆ ತೆರಳುವಂತೆ ಬೆದರಿಕೆ: ಒರ್ವನ ಬಂಧನ

ಸೋನಿಪತ್ (ಹರ್ಯಾಣ), ಜ.24: ಇಲ್ಲಿನ ಮುಸ್ಲಿಂ ಕುಟುಂಬವೊಂದನ್ನು ಪಾಕಿಸ್ತಾನಕ್ಕೆ ತೆರಳುವಂತೆ ಬೆದರಿಕೆ ಹಾಕಿದ ಆರೋಪದಲ್ಲಿ ಪೊಲೀಸರು ಒರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕುಟುಂಬದ ಸದಸ್ಯರಾದ ಸುರೇಶ್ ಅಲ್ವಿ ಹೇಳುವ ಪ್ರಕಾರ, ಕಳೆದ ಮುನ್ನೂರು ವರ್ಷಗಳಿಂದ ಅಲ್ವಿ ಕುಟುಂಬವು ಸೋನಿಪತ್‌ನ ಜೋಶಿ ಜಟ್ ಗ್ರಾಮದಲ್ಲಿ ನೆಲೆಸಿದೆ. ಅಷ್ಟು ಮಾತ್ರವಲ್ಲದೆ, ಈ ಹಿಂದೆ ಅವರ ಕುಟುಂಬ ಸದಸ್ಯರನ್ನು ಗ್ರಾಮದ ಮುಖ್ಯಸ್ಥರನ್ನಾಗಿಯೂ ನೇಮಿಸಲಾಗಿದೆ. ಆ ಗ್ರಾಮದಲ್ಲಿ ನೆಲೆಸಿರುವ ಏಕೈಕ ಮುಸ್ಲಿಂ ಕುಟುಂಬ ಅಲ್ವಿಯವರದ್ದಾಗಿದ್ದು ಉಳಿದ ಗ್ರಾಮಸ್ಥರು ಜಟ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಗ್ರಾಮದವನೇ ಆದ ಜೈವೀರ್ ಎಂಬಾತ ವಾಟ್ಸ್‌ಆ್ಯಪ್ ಮೂಲಕ ಧರ್ಮದ ಹೆಸರಲ್ಲಿ ಜನರನ್ನು ಹಾದಿ ತಪ್ಪಿಸುತ್ತಿದ್ದಾನೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಅಲ್ವಿ ತಿಳಿಸಿದ್ದಾರೆ. ಗ್ರಾಮದ ಹಲವರು ಅಲ್ವಿ ಕುಟುಂಬದ ಬೆಂಬಲಕ್ಕೆ ನಿಂತಿದ್ದು ಯಾವುದೇ ಕಾರಣವಿಲ್ಲದೆ ಅವರಿಗೆ ಬೆದರಿಕೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಮದಲ್ಲಿ ಶಾಂತಿ ನೆಲೆಸಿದ್ದು ಜೈವೀರ್ ಎಂಬ ಒಬ್ಬ ವ್ಯಕ್ತಿ ವಾಟ್ಸ್‌ಆ್ಯಪ್ ಮೂಲಕ ಧಾರ್ಮಿಕ ಭಿನ್ನಾಭಿಪ್ರಾಯ ಮೂಡಿಸಲು ಯತ್ನಿಸುತ್ತಿದ್ದಾನೆ. ಸದ್ಯ ಆತನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು ನಂತರ ಜೈಲಿಗೆ ಕಳುಹಿಸಲಾಗಿದೆ. ಪರಿಸ್ಥಿತಿಯನ್ನು ಕೈಮೀರಿ ಹೋಗದಂತೆ ನೋಡಿಕೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.